ಚುಟುಕು ಸುದ್ದಿಗಳು

Update: 2016-05-05 18:11 GMT



ಬನ್ನಂಜೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ
ಉಡುಪಿ, ಮೇ 5: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೂತನ ಬಸ್ ನಿಲ್ದಾಣ ನಗರದ ಬನ್ನಂಜೆಯಲ್ಲಿ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಮೂಡನಿಡಂಬೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವಶದಲ್ಲಿರುವ 2.77 ಎಕರೆ ಜಾಗವನ್ನು ಕೆಎಸ್ಸಾರ್ಟಿಸಿಗೆ ಹಸ್ತಾಂತರಿಸಿ ಅಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲು ರಾಜ್ಯ ಸಚಿವ ಸಂಪುಟ ಅನುಮತಿ ನೀಡಿದೆ. ಈ ಬಗ್ಗೆ ಈಗಾಗಲೇ ಸರಕಾರಿ ಆದೇಶವನ್ನು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕೇಂದ್ರವಾದರೂ ಇದುವರೆಗೆ ಕೆಎಸ್ಸಾರ್ಟಿಸಿಗೆ ಇಲ್ಲಿ ಸ್ವಂತ ಬಸ್ ನಿಲ್ದಾಣವಿಲ್ಲ. ಸದ್ಯಕ್ಕೆ ನಗರಸಭೆಗೆ ಸೇರಿದ ಜಾಗದಲ್ಲಿ ಅದು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಬನ್ನಂಜೆಯಲ್ಲಿ ಪಿಡಬ್ಲುಡಿಯ ವಶದಲ್ಲಿರುವ 2.77 ಎಕರೆ ಜಾಗವನ್ನು ಬಸ್ ನಿಲ್ದಾಣ ನಿರ್ಮಾಣಕ್ಕೆ ಕೆಎಸ್ಸಾರ್ಟಿಸಿಗೆ ಹಸ್ತಾಂತರಿಸಲು ಹಾಗೂ ಕಿನ್ನಿಮುಲ್ಕಿಯಲ್ಲಿ ಅಗ್ನಿಶಾಮಕ ದಳ ಕಚೇರಿ ಬಳಿ ಕೆಎಸ್ಸಾರ್ಟಿಸಿ ವಶದಲ್ಲಿರುವ 1.12 ಎಕರೆ ಪ್ರದೇಶವನ್ನು ಲೋಕೋಪಯೋಗಿ ಇಲಾಖೆಗೆ ನೀಡುವ ಒಪ್ಪಂದವನ್ನು ಸರಕಾರಿ ಆದೇಶದಲ್ಲಿ ತಿಳಿಸಲಾಗಿದೆ. 1.12 ಎಕರೆ ಪ್ರದೇಶದಲ್ಲಿ ಪಿಡಬ್ಲು ತನ್ನ ನೌಕರರಿಗೆ ವಸತಿಗೃಹ ನಿರ್ಮಿಸಲು ಬಳಸುವಂತೆ ತಿಳಿಸಲಾಗಿದೆ.
ಇದೇ ವೇಳೆ ಈಗ ಸಾರ್ವಜನಿಕ ಶಿಕ್ಷಣ ಇಲಾಖೆಯ ವಶದಲ್ಲಿರುವ ಜಾಗವನ್ನು ಸರಕಾರಿ ಸಿಟಿ ಬಸ್ ನಿಲ್ದಾಣಕ್ಕೆ ಬಿಟ್ಟುಕೊಡಲು ಸಹ ಸರಕಾರ ಅನುಮತಿ ನೀಡಿದೆ. ಮೂಡನಿಡಂಬೂರು ಗ್ರಾಮದ ಶಿರಿಬೀಡು ವಾರ್ಡ್‌ನಲ್ಲಿ ಒಟ್ಟು 0.41 ಎಕರೆ (41 ಸೆಂಟ್ಸ್) ಜಮೀನನ್ನು ನರ್ಮ್ ಯೋಜನೆಯಡಿ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಿಸುವುದಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಉಚಿತವಾಗಿ ನೀಡಲಾಗುತ್ತಿದೆ. ಕೆಎಸ್ಸಾರ್ಟಿಸಿಯ ಆಡಳಿತ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ ಶೀಘ್ರವೇ ಉಡುಪಿಗೆ ಭೇಟಿ ನೀಡಿ ಎರಡೂ ಸ್ಥಳಗಳ ಪರಿಶೀಲನೆ ನಡೆಸುವ ನಿರೀಕ್ಷೆ ಇದೆ ಎಂದು ವಿಶಾಲ್ ತಿಳಿಸಿದ್ದಾರೆ.
ಕೋಡಿಬೇಂಗ್ರೆಯಲ್ಲಿ ಪೊಲೀಸ್ ತರಬೇತಿ ಕೇಂದ್ರ: ಸಾಸ್ತಾನ ಸಮೀಪದ ಕೋಡಿಬೇಂಗ್ರೆಯ 24.1 ಎಕರೆ ಪ್ರದೇಶದಲ್ಲಿ ರಾಜ್ಯ ಸಾಗರ ಪೊಲೀಸ್ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದವರು ಹೇಳಿದರು.
ಈ ಮೊದಲು ಈ ಜಾಗವನ್ನು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಕೋಸ್ಟಲ್ ಪೊಲೀಸಿಂಗ್‌ಗೆ ಕಾದಿರಿಸಲಾಗಿದ್ದು, ಕೇಂದ್ರ ಸರಕಾರ ಪ್ರಕಟಿಸಿರುವ ಪಟ್ಟಿಯಲ್ಲಿ ಕರ್ನಾಟಕ ಸ್ಥಾನ ಪಡೆಯದೇ ಇರುವುದರಿಂದ ಈಗ ಅದೇ ಜಾಗದಲ್ಲಿ ರಾಜ್ಯ ಸರಕಾರ ಭದ್ರತಾ ವ್ಯವಸ್ಥೆಗಾಗಿ ಪೊಲೀಸ್ ತರಬೇತಿ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದವರು ಹೇಳಿದರು.
ಇಲ್ಲಿ ಕೋಸ್ಟಲ್ ಸೆಕ್ಯುರಿಟಿ ಪೊಲೀಸರಿಗಾಗಿ ತರಬೇತಿಯನ್ನು ನೀಡಲು ಸಾಧ್ಯವಾಗಲಿದೆ ಎಂದು ಡಾ.ವಿಶಾಲ್ ತಿಳಿಸಿದರು.
ಇಂದು: ಸುಳ್ಯ ತಾಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ
ಸುಳ್ಯ, ಮೇ 5: ಸುಳ್ಯ ತಾಪಂನ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೇ 6ರಂದು ಚುನಾವಣೆ ನಡೆಯಲಿದೆ.
ಸುಳ್ಯ ತಾಪಂನ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಅಜ್ಜಾವರ ತಾಪಂ ಕ್ಷೇತ್ರದ ಚನಿಯ ಕಲ್ತಡ್ಕ ಅಧ್ಯಕ್ಷರಾಗುವುದು ಖಚಿತ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಶುಭದಾ ರೈ, ಪುಷ್ಪಾ ಮೇದಪ್ಪ, ಜಾಹ್ನವಿ ಕಾಂಚೋಡು ಪೈಪೋಟಿಯಲ್ಲಿದ್ದಾರೆ.


ಅಂಗವಿಕಲ ನಿಧಿಯಿಂದ ಸೈಕಲ್ ವಿತರಣೆ
ಕಾರ್ಕಳ, ಮೇ 5: ಪಂಚಾಯತ್ ರಾಜ್ ದಿವಸ ‘ಗ್ರಾಮ ಉದಯ್ ಸೆ ಭಾರತ್ ಉದಯ್’ ಕಾರ್ಯಕ್ರಮದ ಅಂಗವಾಗಿ ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ಅಂಗವಿಕಲ ಶೇಕಡಾವಾರು ನಿಧಿಯಿಂದ ದ್ವಿಚಕ್ರ ಸೈಕಲ್ ವಿತರಣೆ ಕಾರ್ಯಕ್ರಮವು ರೆಂಜಾಳದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ವಾಸು ಶೆಟ್ಟಿಯವರು ರೆಂಜಾಳ ಅನಿತಾ ದೇವಾಡಿಗರಿಗೆ ಸೈಕಲ್ ವಿತರಿಸಿದರು. ನೋಡೆಲ್ ಅಧಿಕಾರಿಯಾಗಿ ಕೃಷಿ ಅಧಿಕಾರಿ ರಮೇಶ್ ಉಳ್ಳಾಗಡ್ಡಿ ಮತ್ತಿತರರು ಉಪಸ್ಥಿತರಿದ್ದರು.
 ‘ಐಕ್ಯರಂಗ-ಬಿಜೆಪಿ ಮಧ್ಯೆ ಪೈಪೋಟಿ’ ಕಾಸರಗೋಡು, ಮೇ 5: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಐಕ್ಯರಂಗ ಮತ್ತು ಬಿಜೆಪಿ ನಡುವೆ ಮಾತ್ರ ಪೈಪೋಟಿ ನಡೆಯುತ್ತಿದ್ದು, ಎಡರಂಗಕ್ಕೆ ತೀವ್ರ ಹಿನ್ನಡೆ ಉಂಟಾಗಲಿದೆ ಎಂದು ಐಕ್ಯರಂಗ ಚುನಾವಣಾ ಸಮಿತಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  ಐಕ್ಯರಂಗ ಅಭ್ಯರ್ಥಿ ಪಿ.ಬಿ.ಅಬ್ದುರ್ರಝಾಕ್ ವಿರುದ್ಧ ಅಪಪ್ರಚಾರ ಸೃಷ್ಟಿಸಿ ಮತಗಳಿಸುವ ತಂತ್ರಗಾರಿಕೆ ಎಡರಂಗ ಮಾಡುತ್ತಿದೆ. 2011ರಲ್ಲಿ ಎಡರಂಗ ಇಲ್ಲಿ ಮೂರನೇ ಸ್ಥಾನ ಪಡೆದಿತ್ತು. ಇದರಿಂದ ಮಂಜೇಶ್ವರದಲ್ಲಿ ಎಡರಂಗ ಯಾವುದೇ ರೀತಿಯಲ್ಲೂ ಐಕ್ಯರಂಗಕ್ಕೆ ಸವಾಲು ಅಲ್ಲ ಎಂದರು.
   ಸುದ್ದಿಗೋಷ್ಠಿಯಲ್ಲಿ ಐಕ್ಯರಂಗ ಚುನಾವಣಾ ಪ್ರಚಾರ ಸಂಚಾಲಕ, ನ್ಯಾಯವಾದಿ ಬಿ. ಸುಬ್ಬಯ್ಯ ರೈ, ಜಿಪಂ ಅಧ್ಯಕ್ಷ ಎ.ಜಿ.ಸಿ. ಬಶೀರ್, ಪಿ.ಎ. ಅಶ್ರಫಾಲಿ, ಕೇಶವಪ್ರಸಾದ್, ಕೆ. ಮೂಸಾ ಉಪಸ್ಥಿತರಿದ್ದರು.

ನಾಳೆ ಮಹಿಳಾ ಆಯೋಗದ ಅಧ್ಯಕ್ಷರ ಪ್ರವಾಸ
ಮಂಗಳೂರು, ಮೇ 5: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಮೇ 7ರಂದು ಸಂಜೆ 4:30ಕ್ಕೆ ಕಲ್ಲಾಪು ಯುನಿಟಿ ಹಾಲ್‌ನಲ್ಲಿ ರಾಣಿ ಅಬ್ಬಕ್ಕ ಉತ್ಸವ-2016ರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ 7ಕ್ಕೆ ಸರಕಾರಿ ಅತಿಥಿ ಗೃಹ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮೇ 8ರಂದು ಬೆಳಗ್ಗೆ ಮೈಸೂರಿಗೆ ತೆರಳಲಿದ್ದಾರೆ.

ಕರಾವಳಿ ಪ್ರಾಧಿಕಾರ ಅಧ್ಯಕ್ಷರಿಂದ ಕಾಮಗಾರಿ ವೀಕ್ಷಣೆ
ಮಂಗಳೂರು, ಮೇ 5: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಂಗಳೂರು ತಾಲೂಕಿನ ಕುಪ್ಪೆಪದವು (ಈಗಿನ ಮುತ್ತೂರು) ಹಾಗೂ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಪಂಗಳ ಮಧ್ಯೆ ಸಂಪರ್ಕ ಕಲ್ಪಿಸುವ ತೂಗುಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಬಡಗಬೆಳ್ಳೂರು ಗ್ರಾಪಂನ ಉಪಾಧ್ಯಕ್ಷ ಯೋಗೀಶ್ ಪೂಜಾರಿ, ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ನಿಂಗ ಶೆಟ್ಟಿ ಉಪಸ್ಥಿತರಿದ್ದರು.

ಇಂದು ರಾಷ್ಟ್ರೀಯ ವಿಚಾರ ಸಂಕಿರಣ 
ಶಿರ್ವ, ಮೇ 5: ಸಂತ ಮೇರಿ ಕಾಲೇಜಿನ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದಿಂದ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ, ಉಡುಪಿ ಜಿಲ್ಲೆ ಇದರ ಸಹಯೋಗದಲ್ಲಿ ‘ವಿತ್ತೀಯ ವಲಯ ಸುಧಾರಣೆಗಳು’ ಎಂಬ ವಿಷಯದ ಮೇಲೆ ಮೇ 6ರಂದು ಪೂರ್ವಾಹ್ನ 9:45ಕ್ಕೆ ಸಾವುದ್ ಸಭಾಭವನದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ನಡೆಯಲಿದೆ.
ಸಿಂಡಿಕೇಟ್ ಬ್ಯಾಂಕ್ ಮಣಿಪಾಲದ ಫೀಲ್ಡ್ ಜನರಲ್ ಮ್ಯಾನೇಜರ್ ಸತೀಶ್ ಕಾಮತ್ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದಾರೆ. ಬ್ಯಾಂಕ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಎಸ್.ಎಸ್. ಹೆಗ್ಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಂತ ಮೇರಿ ಹಾಗೂ ಡಾನ್ ಬಾಸ್ಕೊ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ವಂ. ಸ್ಟ್ಯಾನಿ ತಾವ್ರೊ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರೋಪ ಕಾರ್ಯಕ್ರಮದಲ್ಲಿ ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಸದಾಶಿವ ರಾವ್ ಕೆ. ಸಮಾರೋಪ ಭಾಷಣ ಮಾಡಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ಪ್ರೊ. ರಾಜನ್ ವಿ.ಎನ್. ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಇಂದು ಎಸ್ಸೆಸ್ಸೆಫ್ ಡಿವಿಜನ್ ಕಾನ್ಫರೆನ್ಸ್ 
ಬಂಟ್ವಾಳ, ಮೇ 5: ಎಸ್ಸೆಸ್ಸೆಫ್ ಬಂಟ್ವಾಳ ಡಿವಿಜನ್ ವತಿಯಿಂದ ‘ಮರಳಿ ಬಾ ಪರಂಪರೆಗೆ’ ಎಂಬ ಘೋಷಣೆಯೊಂದಿಗೆ ಮೇ 6ರಂದು ಸಂಜೆ 5 ಗಂಟೆಗೆ ಆಲಡ್ಕ ಮೈದಾನದ ಸಜಿಪ ಉಸ್ತಾದ್ ವೇದಿಕೆಯಲ್ಲಿ ಡಿವಿಜನ್ ಕಾನ್ಫರೆನ್ಸ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಇಂದು ಪೂಂಜಾಲಕಟ್ಟೆ ನವೀಕೃತ ಮಸೀದಿ ಉದ್ಘಾಟನೆ
ಪೂಂಜಾಲಕಟ್ಟೆ, ಮೇ 5: ಇಲ್ಲಿನ ಬದ್ರಿಯಾ ಜುಮಾ ಮಸೀದಿಯ ನವೀಕೃತ ಮಸೀದಿ ಉದ್ಘಾಟನಾ ಸಮಾರಂಭವು ಮೇ 6ರಂದು ಜರಗಲಿದೆ. ಮಸೀದಿ ಕಟ್ಟಡದ ಉದ್ಘಾಟನೆಯನ್ನು ಅಸೈಯದ್ ಅಲಿ ತಂಙಳ್ ಕುಂಬೋಳ್ ನೆರವೇರಿಸಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮಿತ್ತಬೈಲ್ ಉಸ್ತಾದ್ ಮಸೀದಿಯನ್ನು ವಕ್ಫೃ್ ಮಾಡಿ, ಲೋಕಾರ್ಪಣೆ ಮಾಡಲಿದ್ದಾರೆ. ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಜುಮಾ ನಮಾಝ್ ನೇತೃತ್ವ ವಹಿಸಲಿದ್ದಾರೆ. ಸಮಾರಂಭದಲ್ಲಿ ಖತೀಬ್ ಪಿ.ಎಚ್. ಮುಹಮ್ಮದ್ ಅಶ್ರಫ್ ಫೈಝಿ, ಅಧ್ಯಕ್ಷ ಹಾಜಿ ಪಿ. ಯೂಸುಫ್ ಮೂರ್ಜೆ ಮತ್ತು ಕಂಟ್ರಾಕ್ಟರ್ ತ್ವಾಹಿರ್ ಪೂಂಜಾಲಕಟ್ಟೆ, ಮಸೀದಿಯ ಮಾಜಿ ಅಧ್ಯಕ್ಷರುಗಳಾದ ಹಾಜಿ ಉಮರ್ ಮುಸ್ಲಿಯಾರ್, ಹಾಜಿ ಉಮರಬ್ಬ ಎಂ., ಹಾಜಿ ಯೂಸುಫ್ ಮಂಜಲಪಲ್ಕೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಪಿ., ಉಪಾಧ್ಯಕ್ಷ ಅಬ್ದುಲ್ ರಝಾಕ್ ಬೋರ್ಗುಡ್ಡೆ, ನುಸ್ರತುಲ್ ಇಸ್ಲಾಮ್ ಯಂಗ್‌ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಸಾಜಿ ಹುಸೈನ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಶ್ಫಾಕ್ ಮತ್ತು ಅಬ್ದುಲ್ ಖಾದರ್ ಮುಸ್ಲಿಯಾರ್, ಅಬ್ಬಾಸ್ ಮುಸ್ಲಿಯಾರ್, ಮುಹಮ್ಮದ್ ಶರೀಫ್ ಮದನಿ, ಯಹ್ಯಾ ಮೌಲವಿ ಉಪಸ್ಥಿತರಿರುವರು ಎಂದು ಲತೀಫ್ ಪೂಂಜಾಲಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇಂದು ನೂತನ ಕಚೇರಿ ಉದ್ಘಾಟನೆ
 ಮಂಗಳೂರು, ಮೇ 5: ಮಂಗಳೂರು ಸ್ಟೇಟ್‌ಬ್ಯಾಂಕ್ ಸಮೀಪದ ಸಿಟಿ ಬಸ್‌ಸ್ಟ್ಯಾಂಡ್‌ನಲ್ಲಿರುವ ಪೊಯಿನೀರ್ ಕಾಂಪ್ಲೆಕ್ಸ್‌ನಲ್ಲಿ ತೆರೆಯಲ್ಪಡುವ ಎಂ.ಆರ್. ಬುಕ್‌ಸ್ಟಾಲ್ ಹಾಗೂ ಡಿ.ಟಿ.ಪಿ. ಸೆಂಟರ್ ಮತ್ತು ಸಿತಾರ್ ಕನೆಕ್ಟ್ ಹಾಗೂ ಸುನ್ನಿ ಸಂದೇಶ ಇದರ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು ಮೇ 6ರಂದು ಸಂಜೆ 4 ಗಂಟೆಗೆ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್‌ರನೇತೃತ್ವದಲ್ಲಿ ನಡೆಯಲಿದೆ ಎಂದು ಎಂ.ಆರ್. ಗ್ರೂಪ್‌ನ ಡೈರೆಕ್ಟರ್ ಸಿತಾರ್ ಅಬ್ದುಲ್ ಮಜೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಯುವತಿ ನಾಪತ್ತೆ
ಮಂಜೇಶ್ವರ, ಮೇ 5: ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಬಳಿಯ ಲೀಲಾ ಎಂಬವರ ಪುತ್ರಿ ಶಿಲ್ಪಾ(21) ಮೇ 3ರಿಂದ ನಾಪತ್ತೆಯಾಗಿರುವ ಬಗ್ಗೆ ದೂರಲಾಗಿದೆ.
ಹೊಸಂಗಡಿಯ ಡೆಂಟಲ್ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಾಮೇ 3ರಂದು ತೆರಳಿದವರು ಹಿಂದಿರುಗಿಲ್ಲವೆಂದು ದೂರಲಾಗಿದೆ. ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶಿಲ್ಪಾರನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ ಕಣ್ಣೂರು ಭಾಗದಲ್ಲಿರುವ ಬಗ್ಗೆ ತಿಳಿದು ಬಂದಿದೆ.

ಆರೋಗ್ಯಾಧಿಕಾರಿಗೆ ಜೀವ ಬೆದರಿಕೆ
ಮಂಗಳೂರು, ಮೇ 5: ವಾಮಂಜೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರೇಣುಕಾಗೆ ಚಿಕಿತ್ಸೆಗೆ ರೋಗಿಯೊಂದಿಗೆ ಬಂದಿದ್ದ ವ್ಯಕ್ತಿಯೊಬ್ಬ ಜೀವಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಉಸ್ಮಾನ್ ಎಂಬ ರೋಗಿಯನ್ನು ಮುಹಮ್ಮದ್ (ಮಯ್ಯದಿ) ಎಂಬವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ತೆರಳುವಂತೆ ವೈದ್ಯಾಧಿಕಾರಿ ಸೂಚಿಸಿದ್ದರು. ಬಳಿಕ 40 ನಿಮಿಷ ಕಳೆದರೂ ಆರೋಗ್ಯ ಕೇಂದ್ರದಿಂದ ಹೋಗದಿದ್ದುದನ್ನು ಕಂಡ ವೈದ್ಯಾಧಿಕಾರಿ ಪ್ರಶ್ನಿಸಿದಾಗ ಆರೋಪಿ ಮುಹಮ್ಮದ್ ಅವಾಚ್ಯವಾಗಿ ನಿಂದಿಸಿ ಆಸ್ಪತ್ರೆಯ ನಾಮಫಲಕವನ್ನು ಒಡೆದುಹಾಕಿ ಆಸ್ಪತ್ರೆ ಕಟ್ಟಡವನ್ನು ಸುಟ್ಟು ಹಾಕುವುದಾಗಿ ಮತ್ತು ವೈದ್ಯರನ್ನು ಹೊರಗಡೆ ನೊಡಿಕೊಳ್ಳುವುದಾಗಿ ಜೀವ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.
  ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬದಿಯಡ್ಕ: ಮನೆಯಲ್ಲಿ ಕಳ್ಳತನ
ಮಂಜೇಶ್ವರ, ಮೇ 5: ಇಲ್ಲಿಗೆ ಸಮೀಪದ ಬದಿಯಡ್ಕ ಪೇಟೆಯ ಸರ್ಕಲ್ ಸಮೀಪದ ದಿ.ರಾಮಚಂದ್ರ ಶೆಟ್ಟಿಯ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕೊಠಡಿಯೊಳಗಿನ ಎರಡು ಕಪಾಟುಗಳನ್ನು ಮುರಿದು 20 ಸಾವಿರ ರೂ.100 ಗ್ರಾಂ ಬೆಳ್ಳಿ ಆಭರಣ ಮತ್ತು 1 ಕ್ಯಾಮರಾ ಅಪಹರಿಸಿದ್ದಾರೆ.
ರಾಮಚಂದ್ರ ಶೆಟ್ಟಿಯ ಪತ್ನಿ ಬೇಬಿ ಶೆಟ್ಟಿ ಬುಧವಾರ ವಳಮಲೆಯ ತರವಾಡು ಮನೆಗೆ ತೆರಳಿದ್ದರು. ಗುರುವಾರ ಬೆಳಗ್ಗೆ ಹಿಂದಿರುಗಿ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂತು. ಬದಿಯಡ್ಕ ಪೋಲೀಸರಿಗೆ ದೂರು ನೀಡಲಾಗಿದೆ.

ಚಿನ್ನಾಭರಣ ಕಳವು
ಮಂಗಳೂರು, ಮೇ 5: ಪಣಂಬೂರು ಎನ್‌ಎಂಪಿಟಿ ಕಾಲನಿಯ ರಾಜು ಭೂಪತಿ ಎಂಬವರ ಮನೆಯಲ್ಲಿ ಇಂದು ಮಧ್ಯಾಹ್ನ ಕಳ್ಳತನ ನಡೆದಿದೆ. ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನೊಳಗಿದ್ದ 40 ಗ್ರಾಂ ಚಿನ್ನಾಭರಣ ಮತ್ತು 7 ಸಾವಿರ ರೂ. ನಗದನ್ನು ಕಳವುಗೈದಿದ್ದಾರೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವನೆ: ಇಬ್ಬರ ಸೆರೆ
ಮಂಗಳೂರು,ಮೇ 5: ತಣ್ಣೀರು ಬಾವಿ ಬೀಚ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ನವೀನ್ ಅಮೀನ್ ಮತ್ತು ಧನುಷ್ ಎಂಬವರನ್ನು ಪಣಂಬೂರು ಇನ್‌ಸ್ಪೆಕ್ಟರ್ ಇಂದು ಬಂಧಿಸಿದ್ದಾರೆ. ಆರೋಪಿ ನವೀನ್ ಅಮೀನ್ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದರೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸ್ಟೀರಿಯೋ ಕಳವು
 ಮಂಗಳೂರು, ಮೇ 5: ಉರ್ವಾಸ್ಟೋರ್ ಬಳಿ ಟೆಂಪೋ ಟ್ರಾವೆಲರ್‌ನೊಳಗಿದ್ದ 8 ಸಾವಿರ ರೂ. ವೌಲ್ಯದ ಸ್ಟಿರಿಯೋವನ್ನು ಕಳವುಗೈದ ಘಟನೆ ಇಂದು ನಡೆದಿದೆ. ಆರೋಪಿ ಕಳವುಗೈಯಲು ಕಾರಿನಲ್ಲಿ ಬಂದಿದ್ದು, ಕಳ್ಳವುಗೈಯುತ್ತಿದ್ದ ಸಂದರ್ಭ ಟೆಂಪೋ ಟ್ರಾವಲರ್ ಮಾಲಕ ವಿಕಾಸ್ ಗಮನಿಸಿ ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದರೂ ಪರಾರಿಯಾಗಿದ್ದಾನೆ ಎಂದು ಉರ್ವ ಠಾಣೆಗೆ ದೂರು ನೀಡಲಾಗಿದೆ.

ಮಲ್ಪೆ: ನಾಳೆಯಿಂದ ‘ಜಲೋತ್ಸವ’
ಮಣಿಪಾಲ, ಮೇ 5: ಮಲ್ಪೆ ಅಭಿವೃದ್ಧಿ ಸಮಿತಿ ಮೇ 7 ಮತ್ತು 8ರಂದು ಮಲ್ಪೆ ಸಮುದ್ರ ಕಿನಾರೆಯಲ್ಲಿ ನೀರಿನಾಟಗಳ ಉತ್ಸವ ‘ಮಲ್ಪೆ ಬೀಚ್ ಜಲೋತ್ಸವ’ವನ್ನು ಆಯೋಜಿಸಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರವಾಸೋದ್ಯಮದ ದೃಷ್ಟಿಯಲ್ಲಿ ಮಲ್ಪೆ ಬೀಚ್ ಹಾಗೂ ಸೈಂಟ್ ಮೇರಿಸ್ ದ್ವೀಪಗಳನ್ನು ಉತ್ತೇಜಿಸಲು ಈ ಉತ್ಸವ ಆಯೋಜಿಸಲಾಗುತ್ತಿದೆ. ಜಲೋತ್ಸವದ ಸಂದರ್ಭ ಮೇ 7ರಂದು ಬೆಳಗ್ಗೆ 10ರಿಂದ ಸಂಜೆ 6:30ರವರೆಗೆ ಸರ್ಫಿಂಗ್, ಕಯಾಕಿಂಗ್, ಸ್ಪೀಡ್‌ಬೋಟ್, ಬನಾನಾ ರೈಡ್, ಪ್ಯಾರಾಸೈಲಿಂಗ್ ನಡೆಯಲಿದೆ. ಸಂಜೆ 6:30ರಿಂದ 9:30ರವರೆಗೆ ಜನಪದ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮೇ 8ರಂದು ಬೆಳಗ್ಗೆ 6:30ರಿಂದ 8ರವರೆಗೆ ಬೀಚ್‌ನಲ್ಲಿ ಸಾಮೂಹಿಕ ಯೋಗಾ ಕಾರ್ಯಕ್ರಮ ನಡೆಯಲಿದೆ. ಬಳಿಕ ವಿಶೇಷ ಮಕ್ಕಳಿಗಾಗಿ ಬೆಳಗ್ಗೆ 7:30ರಿಂದ ಈಜು ಸೇರಿದಂತೆ ವಿವಿಧ ಸ್ಪರ್ಧೆಗಳಿವೆ. 9:30ರ ಬಳಿಕ ಮಹಿಳೆ ಯರಿಗೆ ತ್ರೋಬಾಲ್, ಹಗ್ಗ-ಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ಇದ ರೊಂದಿಗೆ ಮರಳುಶಿಲ್ಪ ರಚನಾ ಸ್ಪರ್ಧೆ ನಡೆಯಲಿದೆ. ಈ ಎಲ್ಲ ಸ್ಪರ್ಧೆಗಳ ವಿಜೇತರಿಗೆ ನಗದು ಬಹುಮಾನಗಳಿವೆ. ಸೈಂಟ್ ಮೇರಿಸ್ ದ್ವೀಪದಲ್ಲಿ ಬೆಟ್ಟ ಹತ್ತುವ ಸ್ಪರ್ಧೆ ನಡೆಯಲಿದೆ. ಶನಿವಾರ ಸಂಜೆ ಜೇಸಿಸ್ ಮಣಿಪಾಲ ಹಿಲ್ ಸಿಟಿಯಿಂದ ಆದರ್ಶ ದಂಪತಿ ಸ್ಪರ್ಧೆ ಸಹ ನಡೆಯಲಿದೆ.
ಮೇ 8ರಂದು ಸಂಜೆ 6:45ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿ ಸುವರು ಎಂದವರು ತಿಳಿಸಿದರು.

ಮೂಲರಪಟ್ನ: ಮೇ 8ರಂದು ಸಾಮೂಹಿಕ ವಿವಾಹ
ಬಂಟ್ವಾಳ, ಮೇ 5: ಮೂಲರಪಟ್ನ ಮುಹಿಯುದ್ದೀನ್ ಜುಮಾ ಮಸೀದಿ ಅಧೀನಕ್ಕೊಳಪಟ್ಟ ದಾರುಲ್ ಉಲೂಂ ಮದ್ರಸ ಹಾಗೂ ನುಸ್ರತುಲ್ ಅನಾಮ್ ಸ್ವಲಾತ್ ಕಮಿಟಿಯ ಸಂಯುಕ್ತಾಶ್ರಯದಲ್ಲಿ 10 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ 8ರಂದು ಬೆಳಗ್ಗೆ 9:30ಕ್ಕೆ ಮೂಲರಪಟ್ನ ಎಂ.ಜೆ.ಎಂ. ಗ್ರೌಂಡ್‌ನಲ್ಲಿ ನಡೆಯಲಿದೆ ಎಂದು ಸಂಘಟಕ ನೌಶಾದ್ ಹಾಜಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರದ ಸದಸ್ಯ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಉದ್ಘಾಟಿ ಸುವರು. ಅಧ್ಯಕ್ಷತೆ ಹಾಗೂ ನಿಖಾಹ್ ನೇತೃತ್ವವನ್ನು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ವಹಿಸುವರು. ಸೈಯದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುಆಗೈಯುವರು. ವರದಕ್ಷಿಣೆರಹಿತವಾಗಿ ನಡೆಯುವ ಈ ವಿವಾಹ ಕಾರ್ಯಕ್ರಮದಲ್ಲಿ ಬಡ ಕುಟುಂಬಗಳ ಹೆಣ್ಣು ಮಕ್ಕಳನ್ನು ಗುರುತಿಸಿ 5 ಪವನ್ ಚಿನ್ನಾಭರಣ, 25 ಸಾವಿರ ರೂ. ವೌಲ್ಯದ ಉಡುಗೆ ಹಾಗೂ ವರನಿಗೆ ಹತ್ತು ಸಾವಿರ ರೂ. ವೌಲ್ಯದ ವಸ್ತ್ರಗಳನ್ನು ನೀಡಲಾಗುವುದು. ಸುದ್ದಿಗೋಷ್ಠಿಯಲ್ಲಿ ಅರಳ ಗ್ರಾಪಂ ಸದಸ್ಯ ಎಂ.ಬಿ.ಅಶ್ರಫ್, ಸಮಿತಿಯ ಪ್ರ.ಕಾರ್ಯದರ್ಶಿ ಸಜೀವುದ್ದೀನ್, ಎಂ.ಎಸ್.ಸ್ವಾಲಿಹ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News