ಇರಾನ್‌ಗೆ ಸಂಬಂಧಿಸಿ ಅಮೆರಿಕದಿಂದ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ
ವಿಶ್ವಸಂಸ್ಥೆ, ಮೇ 6: ಇರಾನ್‌ನ ಮುಟ್ಟುಗೋಲು ಹಾಕಲಾದ ಎರಡು ಬಿಲಿಯನ್‌ಡಾಲರ್ (ಸುಮಾರು 13,285 ಕೋಟಿ ರೂಪಾಯಿ) ವೌಲ್ಯದ ಸೊತ್ತುಗಳನ್ನು ಬಳಸಿ ಆ ದೇಶಕ್ಕೆ ಸಂಬಂಧಿಸಿದ ದಾಳಿಗಳ ಸಂತ್ರಸ್ತರಿಗೆ ಪರಿಹಾರ ನೀಡಬಹುದಾಗಿದೆ ಎಂಬ ಅಮೆರಿಕದ ಸುಪ್ರೀಂ ಕೋರ್ಟ್‌ನ ತೀರ್ಪು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಇರಾನ್ ನೇತೃತ್ವದ 120 ದೇಶಗಳ ಅಲಿಪ್ತ ಚಳವಳಿ ಆರೋಪಿಸಿದೆ.
ಅಲಿಪ್ತ ಚಳವಳಿಯ ಸಮನ್ವಯ ಬ್ಯೂರೊ ಈ ಸಂಬಂಧ ಹೇಳಿಕೆಯೊಂದನ್ನು ಹೊರಡಿಸಿದೆ.
ಇದಕ್ಕೂ ಮೊದಲು, ಕಳೆದ ವಾರ ತನ್ನ ನಿಧಿಗಳನ್ನು ರಕ್ಷಿಸುವುದಕ್ಕಾಗಿ ಅಮೆರಿಕ ಮತ್ತು ತನ್ನ ನಡುವಿನ ವಿವಾದಲ್ಲಿ ಮಧ್ಯಪ್ರವೇಶಿಸುವಂತೆ ಇರಾನ್ ವಿಶ್ವಸಂಸ್ಥೆಗೆ ಮನವಿ ಮಾಡಿತ್ತು. ‘‘ಈ ತೀರ್ಪು ನ್ಯಾಯಾಲಯದ ಆದೇಶದ ಸೋಗಿನಲ್ಲಿರುವ ದರೋಡೆಯಾಗಿದೆ’’ ಎಂದು ಇರಾನ್‌ನ ವಿದೇಶ ಸಚಿವ ಮುಹಮ್ಮದ್ ಜಾವೇದ್ ಝರೀಫ್ ಬಣ್ಣಿಸಿದ್ದಾರೆ.
ಸರಕಾರಗಳು ಮತ್ತು ಅವುಗಳ ಸಂಸ್ಥೆಗಳಿಗೆ ನೀಡಲಾಗಿರುವ ಸಾರ್ವಭೌಮ ವಿನಾಯಿತಿಯ ರದ್ದತಿ ಅಮೆರಿಕದ ಅಂತಾರಾಷ್ಟ್ರೀಯ ಮತ್ತು ಒಪ್ಪಂದ ಬದ್ಧತೆಗಳ ಉಲ್ಲಂಘನೆಯಾಗಿದೆ ಎಂದು ಅಭಿವೃದ್ಧಿಶೀಲ ದೇಶಗಳೇ ಹೆಚ್ಚಿನ ಸದಸ್ಯರಾಗಿರುವ ಅಲಿಪ್ತ ಚಳವಳಿ ಹೇಳಿದೆ.
‘‘ಸರಕಾರಗಳಿಗೆ ನೀಡುವ ವಿನಾಯಿತಿ’’ಯ ತತ್ವಗಳನ್ನು ಗೌರವಿಸುವಂತೆ ಅದು ಅಮೆರಿಕ ಸರಕಾರಕ್ಕೆ ಕರೆ ನೀಡಿದೆ ಹಾಗೂ ಇದನ್ನು ಮಾಡಲು ಅಮೆರಿಕ ವಿಫಲವಾದರೆ ಅಂತಾರಾಷ್ಟ್ರೀಯ ಬಾಂಧವ್ಯಗಳಲ್ಲಿ ಏರುಪೇರು ಮತ್ತು ಅಸ್ಥಿರತೆ ಸೇರಿದಂತೆ ಪ್ರತಿಕೂಲ ಪರಿಣಾಮಗಳಾಗಲಿವೆ ಎಂದು ಅಲಿಪ್ತ ಚಳವಳಿ ಎಚ್ಚರಿಸಿದೆ.
ಹೀಗೆ ಮಾಡಲು ಅಮೆರಿಕ ವಿಫಲವಾದರೆ, ಅದು ಅಂತಾರಾಷ್ಟ್ರೀಯ ಕಾನೂನಿನ ಆಡಳಿತವನ್ನು ಕಡೆಗಣಿಸಿದಂತಾಗುತ್ತದೆ ಹಾಗೂ ಅಂತಾರಾಷ್ಟ್ರೀಯ ತಪ್ಪು ಕೃತ್ಯವನ್ನು ಮಾಡಿದಂತೆ ಆಗುತ್ತದೆ ಎಂಬುದಾಗಿಯೂ ಅದು ಹೇಳಿದೆ.
ಲೆಬನಾನ್‌ನಲ್ಲಿ 1983ರಲ್ಲಿ ನಡೆದ ಬಾಂಬ್‌ಸ್ಫೋಟ ಹಾಗೂ ಇರಾನ್ ನಡೆಸಿದೆಯೆಂದು ಹೇಳಲಾದ ಇತರ ದಾಳಿಗಳ ಸಂತ್ರಸ್ತರ ಕುಟುಂಬಗಳಿಗೆ ಇರಾನ್‌ನ ಮುಟ್ಟುಗೋಲು ಹಾಕಲಾದ 2 ಬಿಲಿಯ ಡಾಲರ್ ಸೊತ್ತುಗಳಿಂದ ಪರಿಹಾರ ಕೊಡಬಹುದಾಗಿದೆ ಎಂಬುದಾಗಿ ಅಮೆರಿಕದ ಸುಪ್ರೀಂ ಕೋರ್ಟ್‌ಣಎಪ್ರಿಲ್ 23ರಂದು ತೀರ್ಪು ನೀಡಿತ್ತು.
ಸಿರಿಯ: 48 ಗಂಟೆಗಳ ಯುದ್ಧವಿರಾಮ ಜಾರಿ
ಅಲೆಪ್ಪೊ (ಸಿರಿಯ), ಮೇ 6: ಸಿರಿಯದ ಸಂಘರ್ಷಪೀಡಿತ ಎರಡನೆ ನಗರ ಅಲೆಪ್ಪೊದಲ್ಲಿ ಗುರುವಾರ 48 ಗಂಟೆಗಳ ಅಸ್ಥಿರ ಯುದ್ಧವಿರಾಮ ಜಾರಿಗೆ ಬಂದಿದೆ. ಅಧ್ಯಕ್ಷ ಬಶರ್ ಅಲ್-ಅಸದ್ ಮತ್ತು ಬಂಡುಕೋರ ಗುಂಪುಗಳು ಹೆಚ್ಚುತ್ತಿರುವ ರಾಜತಾಂತ್ರಿಕ ಒತ್ತಡಕ್ಕೆ ಮಣಿದ ಹಿನ್ನೆಲೆಯಲ್ಲಿ ಯುದ್ಧಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ.
ನಿಟ್ಟುಸಿರು ಬಿಟ್ಟ ನಿವಾಸಿಗಳು ಎರಡು ವಾರಗಳ ಭೀಕರ ಕಾಳಗದ ಬಳಿಕ ರಸ್ತೆಗಳಿಗೆ ಬಂದರು.
ಗುರುವಾರ ಮುಂಜಾನೆ 1 ಗಂಟೆಯಿಂದ ಯುದ್ಧವಿರಾಮ ಜಾರಿಗೆ ಬಂದಿದೆ.