×
Ad

ಉಪಗ್ರಹವನ್ನು ಕಕ್ಷೆಯಲ್ಲಿರಿಸಿ ಯಶಸ್ವಿಯಾಗಿ ಭೂಮಿಗೆ ಮರಳಿದ ರಾಕೆಟ್

Update: 2016-05-06 23:31 IST

ಕೇಪ್ ಕ್ಯಾನವರಲ್ (ಫ್ಲೋರಿಡ), ಮೇ 6: ಫ್ಲೋರಿಡದಿಂದ ಶುಕ್ರವಾರ ಉಡಾಯಿಸಲಾದ ‘ಸ್ಪೇಸ್‌ಎಕ್ಸ್’ ಬಾಹ್ಯಾಕಾಶ ಕಂಪೆನಿಯ ಮಾನವರಹಿತ ‘ಫಾಲ್ಕನ್ 9’ ರಾಕೆಟ್, ಸಂಪರ್ಕ ಉಪಗ್ರಹವೊಂದನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಇರಿಸಿತು. ಅಷ್ಟೇ ಅಲ್ಲ, ಬಳಿಕ ಭೂಮಿಯತ್ತ ಪ್ರಯಾಣಿಸಿ ಸಾಗರದಲ್ಲಿರುವ ನಿಲುಗಡೆ ವೇದಿಕೆಯಲ್ಲಿ ಸುರಕ್ಷಿತವಾಗಿ ಇಳಿಯಿತು.
ಉದ್ಯಮಿ ಎಲನ್ ಮಸ್ಕ್‌ರ ಸ್ಪೇಸ್‌ಎಕ್ಸ್ ರಾಕೆಟೊಂದು ಬಾಹ್ಯಾಕಾಶಕ್ಕೆ ಹಾರಿ ಬಳಿಕ ಹಿಮ್ಮುಖ ಪ್ರಯಾಣ ಕೈಗೊಂಡು ಸಮುದ್ರದಲ್ಲಿ ಯಶಸ್ವಿಯಾಗಿ ಭೂಸ್ಪರ್ಶ ನಡೆಸಿರುವುದು ಇದು ಎರಡನೆ ಬಾರಿಯಾಗಿದೆ.

ಈ ಮಾದರಿಯ ರಾಕೆಟ್‌ಗಳ ಯಶಸ್ಸಿನ ಹಿನ್ನೆಲೆಯಲ್ಲಿ, ರಾಕೆಟ್‌ಗಳನ್ನು ಮರು ಬಳಕೆ ಮಾಡಿ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಉಡಾಯಿಸುವ ಕೊಡುಗೆಯನ್ನು ನೀಡಲು ಕಂಪೆನಿ ಮುಂದಾಗಿದೆ.
ರಾಕೆಟ್ ಸಮುದ್ರದಲ್ಲಿ ಭೂಸ್ಪರ್ಶ ನಡೆಸಿದ ಬಳಿಕ, ಟ್ವಿಟರ್‌ನಲ್ಲಿ ‘‘ವೋ.... ಹೋ...’’ ಎಂಬ ಸಂದೇಶವೊಂದನ್ನು ಮಸ್ಕ್ ಹಾಕಿದರು. ‘‘ರಾಕೆಟ್ ಸಂಗ್ರಹಾಗಾರದ ಗಾತ್ರವನ್ನು ಹಿಗ್ಗಿಸಬೇಕಾದ ಅಗತ್ಯವಿದೆ’’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದರು.

ನಾಲ್ಕು ವಿಫಲ ಯತ್ನಗಳ ಬಳಿಕ, ಸ್ಪೇಸ್‌ಎಕ್ಸ್ ಎಪ್ರಿಲ್‌ನಲ್ಲಿ ಬಾಹ್ಯಾಕಾಶದಿಂದ ಹಿಂದಕ್ಕೆ ಬಂದ ರಾಕೆಟೊಂದನ್ನು ಯಶಸ್ವಿಯಾಗಿ ಸಮುದ್ರದ ವೇದಿಕೆಯಲ್ಲಿ ಇಳಿಸಿತ್ತು. ಇನ್ನೊಂದು ಫಾಲ್ಕನ್ ರಾಕೆಟ್ ಡಿಸೆಂಬರ್‌ನಲ್ಲಿ ಕೇಪ್ ಕ್ಯಾನವರಲ್‌ನಲ್ಲಿ ನೆಲದ ಮೇಲಿನ ಇಳಿದಾಣ ವೇದಿಕೆಯಲ್ಲಿ ಯಶಸ್ವಿಯಾಗಿ ಇಳಿದಿತ್ತು. ಶುಕ್ರವಾರ ಹಾರಿ ಬಿಡಲಾದ ರಾಕೆಟ್ ಕಳೆದ ತಿಂಗಳು ಹಾರಿಸಲಾದ ರಾಕೆಟ್‌ಗಿಂತ ದುಪ್ಪಟ್ಟು ವೇಗದಲ್ಲಿ ಹಾರಿತು. ಅದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ 32,200 ಕಿಲೋಮೀಟರ್ ದೂರದಲ್ಲಿರುವ ಕಕ್ಷೆಯೊಂದರಲ್ಲಿ ಟೋಕಿಯೊದ ದೂರಸಂಪರ್ಕ ಕಂಪೆನಿಯೊಂದರ ಬೃಹತ್ ಟಿವಿ ಪ್ರಸಾರ ಉಪಗ್ರಹವನ್ನು ಕೂರಿಸಿತು. ಬಾಹ್ಯಾಕಾಶ ನಿಲ್ದಾಣವು ಭೂಮಿಯಿಂದ 400 ಕಿ.ಮೀ. ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News