'ನೀಟ್' ಕಟ್ಟುನಿಟ್ಟಾಗಿ ಪಾಲಿಸಿ: ಖಾಸಗಿ ಕಾಲೇಜುಗಳಿಗೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಮೇ 6: ಖಾಸಗಿ ಕಾಲೇಜುಗಳು, ಡೀಮ್ಡ್ ವಿಶ್ವ ವಿದ್ಯಾನಿಲಯಗಳು ಹಾಗೂ ಅವುಗಳ ಒಕ್ಕೂಟಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ತಮ್ಮದೇ ಆದ ಪರೀಕ್ಷೆಗಳನ್ನು ನಡೆಸಲು ಅವಕಾಶವಿಲ್ಲ ಹಾಗೂ 2016-17 ರ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ಎನ್‌ಇಇಟಿ(ನೀಟ್) ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸುಪ್ರೀಂಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಅನಿಲ್ ಆರ್. ದವೆ ನೇತೃತ್ವದ ಪೀಠ ನೀಡಿರುವ ವೌಖಿಕ ಆದೇಶದ ಹಿನ್ನೆಲೆಯಲ್ಲಿ ಹಲವಾರು ಖಾಸಗಿ ವೈದ್ಯಕೀಯ ಕಾಲೇಜುಗಳ ವಕಾಲತ್ತು ವಹಿಸಿರುವ ವಕೀಲರು ಕೋಲಾಹಲವೆಬ್ಬಿಸಿದರು.ತಮ್ಮ ಸ್ವಂತ ಸಂಸ್ಥೆಗಳನ್ನು ಸ್ಥಾಪಿಸುವುದು ಮತ್ತು ಅವುಗಳ ಆಡಳಿತ ನಿರ್ವಹಿಸುವ ತಮ್ಮ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಪೀಠದೆದುರು ಪ್ರತಿಭಟಿಸಿದರು.
ಒಂದು ವೇಳೆ ಖಾಸಗಿ ವೈದ್ಯಕೀಯ ಕಾಲೇಜುಗಳು ಎನ್‌ಇಇಟಿಯನ್ನು ಅಳವಡಿಸಿಕೊಳ್ಳಲು ಬಲವಂತ ಪಡಿಸಿದರೆ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ನೀಡಲಾಗುತ್ತಿರುವ ಶೇ 50 ರಷ್ಟು ಮೀಸಲಾತಿ ಸೀಟುಗಳನ್ನು ವಾಪಸು ತೆಗೆದುಕೊಳ್ಳದೆ ಅವರಿಗೆ ಬೇರೆ ದಾರಿಗಳಿಲ್ಲ ಎಂದು ಹಿರಿಯ ವಕೀಲ ರಾಜೀವ್ ಧವನ್ ಪೀಠದೆದುರು ಉಚ್ಚರಿಸಿದ್ದಾರೆ.
ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಎನ್‌ಇಇಟಿಯಿಂದ ವಿನಾಯಿತಿ ಪಡೆಯುವ ಸಂಬಂಧವಾಗಿ ರಾಜ್ಯಗಳೊಂದಿಗೆ ಚರ್ಚಿಸಲು ಹಾಗೂ ರಾಜ್ಯ ಸರಕಾರಿ ಕಾಲೇಜುಗಳಿಗೆ ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರಕಾರಕ್ಕೆ ಮೇ 9ರವರೆಗೆ ನ್ಯಾಯಮೂರ್ತಿಗಳಾದ ಶಿವ ಕೀರ್ತಿ ಸಿಂಗ್ ಹಾಗೂ ಎ.ಕೆ.ಗೋಯಲ್‌ರವರನ್ನೊಳಗೊಂಡ ಪೀಠ ಕಾಲಾವಕಾಶವನ್ನು ನೀಡಿದೆ.
ಎನ್‌ಇಇಟಿ ಮತ್ತು ರಾಜ್ಯ ಪರೀಕ್ಷೆಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಈ ವಾರದ ಕೊನೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ಇತರ ರಾಜ್ಯದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ತಿಳಿಸಿದ್ದಾರೆ.
ಮೇ 1 ರಂದು ಪ್ರಥಮ ಹಂತದ ಪರೀಕ್ಷೆಯಲ್ಲಿ ಹಾಜರಾದ ವಿದ್ಯಾರ್ಥಿಗಳಿಗೆ ಜುಲೈ 24 ರಂದು ನಡೆಯುವ ದ್ವಿತೀಯ ಹಂತದ ಪ್ರವೇಶ ಪರೀಕ್ಷೆಯಲ್ಲಿ ಮತ್ತೊಂದು ಅವಕಾಶ ಕೊಡಬೇಕೆ ಎಂಬುದರ ಬಗ್ಗೆ ನ್ಯಾಯಾಲಯದ ಪ್ರಶ್ನೆಗೆ ಮೇ 10 ರಂದು ಉತ್ತರಿಸಲಿದ್ದೇವೆ ಎಂದು ಕೇಂದ್ರ ಸರಕಾರ ತಿಳಿಸಿದೆ.
‘‘ನಮಗೆ ಸ್ವಲ್ಪ ಕಾಲಾವಕಾಶವನ್ನು ನೀಡಿ.ಮುಂದಿನ ಎರಡು ದಿನಗಳಲ್ಲಿ ರಾಜ್ಯಗಳೊಂದಿಗೆ ನಾವು ಸಭೆ ನಡೆಸಲಿದ್ದೇವೆ.ಅವುಗಳು ಈ ವಿವಾದ ಇತ್ಯರ್ಥಗೊಳ್ಳಬೇಕೆಂದು ಬಯಸಿವೆ ’’ಎಂದು ರಂಜಿತ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.