ಕೃಷಿಯೋಗ್ಯ ಭೂಮಿ ಕಡಿಮೆಯಾಗುತ್ತಿದೆ, ಆದರೆ ಆತಂಕದ ಸ್ಥಿತಿಯಿಲ್ಲ: ಸರಕಾರ
ಹೊಸದಿಲ್ಲಿ,ಮೇ 6: ದೇಶದಲ್ಲಿ ಕೃಷಿಯೋಗ್ಯ ಭೂಮಿಯು ಪ್ರತಿ ವರ್ಷ 0.03 ಮಿಲಿಯನ್ ಹೆಕ್ಟೇರ್ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ,ಆದರೆ ಆತಂಕದ ಸ್ಥಿತಿಯಿಲ್ಲ ಎಂದು ಸರಕಾರವು ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿತು.
ಪ್ರಶ್ನೆವೇಳೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಹಾಯಕ ಕೃಷಿಸಚಿವ ಸಂಜೀವ ಬಲಿಯಾನ್‌ಅವರು, ಸರಾಸರಿ ಕೃಷಿಯೋಗ್ಯ ಭೂಮಿಯು ವಾರ್ಷಿಕ 0.03 ಮಿಲಿಯನ್ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ, ಆದರೆ ಭೂಮಿಯ ಉತ್ಪಾದಕತೆಯು ನಿಧಾನವಾಗಿ ಹೆಚ್ಚುತ್ತಿದೆ. ಬಿತ್ತನೆಯಾಗುವ ಪ್ರದೇಶದ ವಿಸ್ತೀರ್ಣದಲ್ಲಿ ಹೆಚ್ಚುಕಡಿಮೆ ಯಾವುದೇ ಬದಲಾವಣೆಯಿಲ್ಲ. ನೀರಾವರಿ ಸೌಲಭ್ಯಗಳ ಸುಧಾರಣೆಯ ಮೇಲೆ ಗಮನ ಕೇಂದ್ರೀಕರಿಸುವುದರೊಂದಿಗೆ ಬೆಳೆ ಸಾಂದ್ರತೆ ಶೇ.138ರಿಂದ ಶೇ.200ಕ್ಕೆ ಹೆಚ್ಚಿರುವುದು ಇದಕ್ಕೆ ನಿದರ್ಶನವಾಗಿದೆ ಎಂದರು.
ಬೀಜಗಳ ಗುಣಮಟ್ಟ ಸಮಸ್ಯೆಯಾಗಿದೆ ಎಂದ ಅವರು, ಕೃಷಿಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆ ಮತ್ತು ಹೆಚ್ಚಿನ ನೀರಾವರಿ ಸೌಲಭ್ಯಗಳೊಂದಿಗೆ ಇಳುವರಿಯನ್ನು ಹೆಚ್ಚಿಸಬಹುದಾಗಿದೆ ಎಂದರು.
ದೇಶದಲ್ಲಿ ಶೇ.45ರಷ್ಟು ಕೃಷಿಭೂಮಿ ಮಾತ್ರ ನೀರಾವರಿ ಸೌಲಭ್ಯ ಹೊಂದಿರುವುದು ಅತ್ಯಂತ ದೊಡ್ಡ ಸಮಸ್ಯೆಯಾಗಿದೆ ಎಂದರು.
ಪ್ರತಿ ಹನಿ ನೀರಿಗೂ ಗರಿಷ್ಠ ಇಳುವರಿ ಪಡೆಯುವ ಇಸ್ರೇಲ್‌ನಂತಹ ದೇಶಗಳಿಗೆ ಹೋಲಿಸಿದರೆ ಭಾರತವು ತೀರ ಹಿಂದುಳಿದಿದೆ ಎಂದು ಒಪ್ಪಿಕೊಂಡ ಅವರು, ತಮಿಳುನಾಡು,ಮಹಾರಾಷ್ಟ್ರ ಮತ್ತು ಗುಜರಾತ್‌ಗಳಂತಹ ರಾಜ್ಯಗಳು ಹನಿ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿವೆ ಎಂದು ತಿಳಿಸಿದರು.
ಬೆಳೆ ಇಳುವರಿಯನ್ನು ಹೆಚ್ಚಿಸಲು ನೆರವಾಗಲೆಂದೇ ಪ್ರಧಾನ ಮಂತ್ರಿಗಳ ಕೃಷಿ ಸಿಂಚಾಯಿ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ಬೆಟ್ಟು ಮಾಡಿದರು.