ಮೋದಿಗೆ ಆತ್ಮರತಿಯ ಗೀಳು: ಅರುಣ್ ಶೌರಿ ಟೀಕೆ
ಹೊಸದಿಲ್ಲಿ,ಮೇ 6: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಖ್ಯಾತ ಪತ್ರಕರ್ತ ಹಾಗೂ ಮಾಜಿ ಕೇಂದ್ರ ಸಚಿವ ಅರುಣ ಶೌರಿ ಅವರು ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ. ಮೋದಿಯವರಿಗೆ ‘ಆತ್ಮರತಿ’ಯ ಗೀಳು ಹಿಡಿದಿದೆ ಮತ್ತು ಅವರು ಏಕವ್ಯಕ್ತಿ ‘ಅಧ್ಯಕ್ಷೀಯ ಸರಕಾರ’ವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಶೌರಿ,ಈ ಸರಕಾರವು ಭಾರತಕ್ಕೆ ಅಪಾಯಕಾರಿಯಾಗಿರುವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದು ಇತ್ತೀಚೀನ ಕೆಲವು ವರ್ಷಗಳಿಂದ ಬಿಜೆಪಿಯಿಂದ ದೂರವಾಗಿರುವ ಶೌರಿ ಇಂಡಿಯಾ ಟುಡೆ ಟಿವಿಯ ‘ಟು ದಿ ಪಾಯಿಂಟ್’ ಕಾರ್ಯಕ್ರಮಕ್ಕಾಗಿ ಕರಣ್ ಥಾಪರ್‌ಗೆ ನೀಡಿರುವ 40 ನಿಮಿಷಗಳ ಸಂದರ್ಶನದಲ್ಲಿ ಮೋದಿಯವರನ್ನು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ.
ಮೋದಿ ಸರಕಾರದ ಎರಡು ವರ್ಷಗಳ ಆಡಳಿತವನ್ನು ವಿಶ್ಲೇಷಿಸಿದ ಅವರು, ಮುಂದಿನ ಮೂರು ವರ್ಷಗಳಲ್ಲಿ ‘ಅನನುಕೂಲಕರ ಧ್ವನಿಗಳನ್ನು’ ಅಡಗಿಸುವ ಜೊತೆಗೆ ನಾಗರಿಕ ಸ್ವಾತಂತ್ರಗಳನ್ನು ಹತ್ತಿಕ್ಕಲು ಹೆಚ್ಚು ವ್ಯವಸ್ಥಿತ ಯತ್ನ ಮತ್ತು ‘ವಿಕೇಂದ್ರಿಕೃತ ಬೆದರಿಕೆ’ನಡೆಯಲಿದೆ ಎಂದು ತಾನು ನಿರೀಕ್ಷಿಸಿರುವುದಾಗಿ ಹೇಳಿದ್ದಾರೆ.
ಈ ಹಿಂದೆಯೂ ಮೋದಿಯವರನ್ನು ಟೀಕಿಸಿರುವ ಶೌರಿ,ಪ್ರಧಾನ ಮಂತ್ರಿ ಜನರ ಬಗ್ಗೆ ‘ಬಳಸಿ ಎಸೆಯುವ’ ಧೋರಣೆಯನ್ನು ಹೊಂದಿದ್ದಾರೆ. ಅವರು ಜನರನ್ನು ಪೇಪರ್ ನ್ಯಾಪ್ಕಿನ್‌ಗಳಂತೆ ಬಳಸುತ್ತಿದ್ದಾರೆ ಮತ್ತು ಅವರಿಗೆ ಈ ಬಗ್ಗೆ ಪಶ್ಚಾತ್ತಾಪವೂ ಇಲ್ಲ ಎಂದು ಆರೋಪಿಸಿದ್ದಾರೆ ಎಂದು ಇಂಡಿಯಾ ಟುಡೆ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.
ಮೋದಿಯವರ ಎರಡು ವರ್ಷಗಳ ಆಡಳಿತವನ್ನು ‘ಪ್ರತಿಯೊಬ್ಬರೊಂದಿಗಿನ ಬಾಕ್ಸಿಂಗ್ ಪಂದ್ಯ’ ಎಂದು ಬಣ್ಣಿಸಿದ ಶೌರಿ,ಅವರ ಬಗ್ಗೆ ನಾವು ಹೊಂದಿದ್ದ ನಿರೀಕ್ಷೆ ಹುಸಿಯಾಗಿದೆ. ಭಾರೀ ಅವಕಾಶವೊಂದನ್ನು ಅವರು ಸಂಪೂರ್ಣವಾಗಿ ತಪ್ಪಿಸಿಕೊಂಡಿದ್ದಾರೆ ಎಂದಿದ್ದಾರೆ.