ಸಿರಿಯದಲ್ಲಿ ಪಕ್ಷಪಾತಪೂರಿತ ವರದಿಗಾರಿಕೆಗೆ ಬೇಸತ್ತು ಬಿಬಿಸಿ ಪತ್ರಕರ್ತೆ ರಾಜೀನಾಮೆ
ಲಂಡನ್, ಮೇ 7: ಸಿರಿಯ ಸಂಘರ್ಷದ ವರದಿಗಾರಿಕೆಯಲ್ಲಿ ತಾರತಮ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ಬಿಬಿಸಿ ಅರೇಬಿಕ್ ಟೆಲಿವಿಶನ್‌ನ ಖ್ಯಾತ ಪತ್ರಕರ್ತರೊಬ್ಬರು ಬಿಬಿಸಿಗೆ ರಾಜೀನಾಮೆ ನೀಡಿದ್ದಾರೆ.
ತನ್ನ ತವರು ದೇಶ ಸಿರಿಯದ ಸಂಘರ್ಷವನ್ನು ತನ್ನ ಸಂಸ್ಥೆ ವರದಿ ಮಾಡುತ್ತಿರುವ ರೀತಿಯೂ ಬಿಬಿಸಿಯನ್ನು ತೊರೆಯುವ ತನ್ನ ನಿರ್ಧಾರಕ್ಕೆ ಒಂದು ಕಾರಣವಾಗಿದೆ ಎಂದು ಡಿಮಾ ಇಸುದ್ದೀನ್ ಹೇಳಿದ್ದಾರೆ.
ಸಿರಿಯ ಸರಕಾರದ ಅಧಿಕೃತ ಹೇಳಿಕೆಗಳ ಸುತ್ತವೇ ಬಿಬಿಸಿ ಅಲ್ಲಿನ ವಿದ್ಯಮಾನಗಳನ್ನು ವರದಿ ಮಾಡುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
ಅವರು ತನ್ನ ನಿರ್ಧಾರವನ್ನು ಫೇಸ್‌ಬುಕ್‌ನಲ್ಲಿ ಘೋಷಿಸಿದ್ದಾರೆ. ‘‘ಒಂದು ವರ್ಷದ ವಿರಾಮದ ಬಳಿಕ ಇಂದು ನಾನು ಬಿಬಿಸಿ ಪರದೆಗೆ ಮರಳಬೇಕಾಗಿತ್ತು. ಆದರೆ, ಇನ್ನೆಂದೂ ನಾನು ಅಲ್ಲಿಗೆ ಹೋಗುವುದಿಲ್ಲ. ಈ ಶ್ರೇಷ್ಠ ಸಂಸ್ಥೆ ಅಳವಡಿಸಿಕೊಂಡಿರುವ ಮಾನದಂಡಗಳು ಅದನ್ನು ನಂಬರ್ ವನ್ ಮಾಧ್ಯಮವನ್ನಾಗಿ ಮಾಡಬೇಕಾಗಿತ್ತು. ಆದರೆ ಹಾಗಾಗಿಲ್ಲ. ಟಿವಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ವಿದಾಯ ಹೇಳಲು ಇದ ಸಕಾಲ. ಬಿಬಿಸಿ ನನಗೆ ತುಂಬಾ ವಿಷಯಗಳನ್ನು ಕಲಿಸಿಕೊಟ್ಟಿದೆ. ಅಲ್ಲಿನ ನನ್ನ ಸ್ನೇಹಿತರನ್ನು ನಾನು ಪ್ರೀತಿಸುತ್ತೇನೆ. ಅವರನ್ನು ಬಿಟ್ಟು ಹೋಗುವುದಕ್ಕೆ ನನಗೆ ವಿಷಾದವಿದೆ. ಒಂದು ಸಂಸ್ಥೆಗೆ ಅದರದೇ ಆದ ಮಾನದಂಡಗಳಿರಬೇಕು. ಆದರೆ, ಹಾಗಾಗಿಲ್ಲ. ದುರದೃಷ್ಟವಶಾತ್ ಹಾಗಾಗುವಂತೆ ನೋಡಿಕೊಳ್ಳುವ ರೀತಿಯೂ ಇಲ್ಲ. ಬಿಬಿಸಿಯಿಂದ ನನ್ನನ್ನು ಪ್ರತ್ಯೇಕಗೊಳಿಸಿದ್ದು ನನ್ನ ದೇಶದ ಸುದ್ದಿಯನ್ನು ಅದು ವರದಿ ಮಾಡುವ ರೀತಿ’’ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಸಿರಿಯದಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟಗಳ ಬಗ್ಗೆ ಬಿಬಿಸಿ ವರದಿ ಮಾಡಿದ ರೀತಿ ವಿವಾದಕ್ಕೆ ಕಾರಣವಾಗಿದೆ ಎಂದು ಲಂಡನ್‌ನ ಅಲ್‌ಅರೇಬಿಯ.ಕೊ.ಯುಕೆ. ಹೇಲಿದೆ. ದಾಳಿಯಾದ ಸ್ಥಳದಲ್ಲಿ ಅಧ್ಯಕ್ಷ ಬಶರ್ ಅಲ್-ಅಸಾದ್‌ರ ಬೆಂಬಲಿಗರು ವಾಸಿಸುತ್ತಿದ್ದರು ಹಾಗೂ ಬಂಡುಕೋರರು ದಾಳಿಯನ್ನು ನಡೆಸಿದ್ದರು ಎಂಬುದಾಗಿ ಬಿಬಿಸಿ ಅರೇಬಿಕ್ ವರದಿ ಮಾಡಿತ್ತು.
ಆದರೆ, ವಾಸ್ತವಿಕವಾಗಿ ಆ ದಾಳಿಯನ್ನು ಬಂಡುಕೋರರ ಪ್ರಾಬಲ್ಯದ ಅಲೆಪ್ಪೊದ ಮೇಲೆ ಅಸಾದ್ ಸರಕಾರದ ಪಡೆಗಳೇ ನಡೆಸಿದ್ದವು. ಈ ದಾಳಿಯಲ್ಲಿ 44 ನಾಗರಿಕರು ಮೃತಪಟ್ಟಿದ್ದಾರೆ.
ತನ್ನ ತಪ್ಪನ್ನು ಅರಿತುಕೊಂಡ ಬಿಬಿಸಿ ಬಳಿಕ ಟ್ವಿಟರ್‌ನಲ್ಲಿ ಅದಕ್ಕೆ ಸ್ಪಷ್ಟೀಕರಣ ನೀಡಿತ್ತು.