×
Ad

ಕೊಹ್ಲಿ ಎರಡನೆ ಶತಕದ ಕೊಯ್ಲು; ಆರ್‌ಸಿಬಿಗೆ ಜಯ

Update: 2016-05-07 22:52 IST

 ಬೆಂಗಳೂರು, ಮೇ 7: ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನ 9ನೆ ಆವೃತ್ತಿಯ ಟ್ವೆಂಟಿ-20 ಪಂದ್ಯದಲ್ಲಿ ಔಟಾಗದೆ ದಾಖಲಿಸಿದ ಎರಡನೆ ಶತಕದ ಸಹಾಯದಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂದು ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 192 ರನ್‌ಗಳ ಕಠಿಣ ಸವಾಲನ್ನು ಪಡೆದ ಆರ್‌ಸಿಬಿ ತಂಡಕ್ಕೆ ನಾಯಕ ಕೊಹ್ಲಿ ಔಟಾಗದೆ 108 ರನ್(58ಎ,8ಬೌ, 7ಸಿ) ದಾಖಲಿಸಿ ತಂಡವನ್ನು ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ತಲುಪಿಸಿದರು.
ಇನಿಂಗ್ಸ್ ಆರಂಭಿಸಿದ ಕೊಹ್ಲಿ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಮೊದಲ ವಿಕೆಟ್‌ಗೆ 11.1 ಓವರ್‌ಗಳಲ್ಲಿ 94 ರನ್‌ಗಳ ಜೊತೆಯಾಟ ನೀಡಿದರು.
ರಾಹುಲ್ 35 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 38ರನ್ ಗಳಿಸಿ ಪೆವಿಲಿಯನ್ ಸೇರಿದರು. ರಾಹುಲ್ ಅವರು ಝಾಂಪ ಎಸೆತದಲ್ಲಿ ಬೈಲಿಗೆ ಕ್ಯಾಚ್ ನೀಡಿದರು. ಕ್ರೀಸ್‌ಗೆ ಆಗಮಿಸಿದ ಎಬಿ ಡಿವಿಲಿಯರ್ಸ್‌ (1)ಅದೇ ಓವರ್‌ನ ಕೊನೆಯ ಎಸೆತದಲ್ಲಿ ಪೆರೆರಾಗೆ ವಿಕೆಟ್ ಒಪ್ಪಿಸಿದರು. ಮೂರನೆ ವಿಕೆಟ್‌ಗೆ ಕೊಹ್ಲಿಗೆ ಜೊತೆಯಾದ ವ್ಯಾಟ್ಸನ್ ಸ್ಫೋಟಕ ಬ್ಯಾಟಿಂಗ್‌ಗೆ ಒತ್ತು ನೀಡಿದರು.

13 ಎಸೆತಗಳನ್ನು ಎದುರಿಸಿದ ವ್ಯಾಟ್ಸನ್ 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 36 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. 13 ಓವರ್‌ಗಳ ಮುಕ್ತಾಯಕ್ಕೆ ಆರ್‌ಸಿಬಿ 103 ರನ್ ಗಳಿಸಿತ್ತು. 42 ಎಸೆತಗಳಲ್ಲಿ 89 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆರ್‌ಸಿಬಿಯ ಗೆಲುವಿಗೆ ಹಾದಿ ಸುಲಭವಾಗಿರಲಿಲ್ಲ. ವ್ಯಾಟ್ಸನ್ 14ನೆ ಓವರ್‌ನಲ್ಲಿ ಪೆರೆರಾ ಓವರ್‌ನ ಎಸೆತಗಳಲ್ಲಿ 5 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದರು. 20 ರನ್‌ಗಳನ್ನು ತಂಡದ ಖಾತೆಗೆ ಸೇರಿಸಿದರು.
 ರಜತ್ ಭಾಟಿಯಾ ಅವರ 15ನೆ ಓವರ್‌ನಲ್ಲಿ ಮೊದಲ ಎಸೆತದಲ್ಲಿ ಚೆಂಡನ್ನು ವಿರಾಟ್ ಕೊಹ್ಲಿ ಬೌಂಡರಿಗೆ ಅಟ್ಟಿದರು. ಬಳಿಕ ವ್ಯಾಟ್ಸನ್ ಎರಡು ಸಿಕ್ಸರ್ ಬಾರಿಸಿ ಆ ಓವರ್‌ನಲ್ಲಿ ಈ ಜೋಡಿ 19 ರನ್ ಕಬಳಿಸಿತು. ಮುಂದಿನ ಓವರ್‌ನಲ್ಲಿ ವ್ಯಾಟ್ಸನ್ ಔಟಾದರು.
18ನೆ ಓವರ್‌ನಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ, 19ನೆ ಓವರ್‌ನಲ್ಲಿ 2 ಸಿಕ್ಸರ್ ಮತ್ತು ಅಂತಿಮ ಓವರ್‌ನಲ್ಲಿ ಒಂದು ಬೌಂಡರಿ ಬಾರಿಸಿದ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಅಜಿಂಕ್ಯ ರಹಾನೆ ಮತ್ತು ಸೌರಭ್ ತಿವಾರಿ ಅವರ ಆಕರ್ಷಕ ಅರ್ಧಶತಕದ ನೆರವಿನಲ್ಲಿ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 191 ರನ್ ಗಳಿಸಿತ್ತು.
 ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರೈಸಿಂಗ್ ಪುಣೆ ತಂಡ ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ ವಿಕೆಟ್‌ನ್ನು ಬೇಗನೆ ಕಳೆದುಕೊಂಡರೂ, ಎರಡನೆ ವಿಕೆಟ್‌ಗೆ 106 ರನ್ ತಂಡದ ಖಾತೆಗೆ ಸೇರ್ಪಡೆಗೊಂಡಿತು. ಅಜಿಂಕ್ಯ ರಹಾನೆ ಮತ್ತು ಸೌರಭ್ ತಿವಾರಿ ತಂಡವನ್ನು ಆಧರಿಸಿದರು.
ರಹಾನೆ 48 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 74 ರನ್, ಸೌರಭ್ ತಿವಾರಿ 52 ರನ್(39ಎ, 9ಬೌ) ಕೊಡುಗೆ ನೀಡಿದರು.
ಧೋನಿ 9 ರನ್, ತಿಸ್ಸರಾ ಪೆರೆರಾ 14ರನ್, ರಜತ್ ಭಾಟಿಯಾ ಔಟಾಗದೆ 9ರನ್ ಮತ್ತು ಆರ್.ಅಶ್ವಿನ್ ಔಟಾಗದೆ 10 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News