×
Ad

ನಾನು ತಪ್ಪಿತಸ್ಥನಲ್ಲ-ಅಕಾಲ್ ತಖ್ತ್‌ಗೆ ಕ್ಷಮಾ ಯಾಚನೆ ಪತ್ರ ಬರೆದಿಲ್ಲ: ಟೈಟ್ಲರ್

Update: 2016-05-07 23:38 IST

ಹೊಸದಿಲ್ಲಿ, ಮೇ 7: ಕಳೆದ 1984ರ ಸಿಖ್ ವಿರೋಧಿ ದಂಗೆಯಲ್ಲಿ ತಾನು ‘ಅಮಾಯಕನೆಂದು’ ವಾದಿಸಲು ಈ ವಾರ ಪಂಜಾಬಿ ಟಿವಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನವೊಂದು ಹಿರಿಯ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್‌ರನ್ನು ಹೊಸದೊಂದು ಸಂಕಷ್ಟದಲ್ಲಿ ಸಿಲುಕಿಸಿದೆ.

ಎಬಿಪಿ ಸಾಂಝಾ ವಾಹಿನಿಯಲ್ಲಿ ಗುರುವಾರ ಪ್ರಸಾರವಾದ ಸಂದರ್ಶನದಲ್ಲಿ, ತಾನು ತನ್ನ ನಿಲುವನ್ನು ಸ್ಪಷ್ಟಪಡಿಸುವುದಕ್ಕಾಗಿ ಸಿಖ್ಖರ ಅತ್ಯುನ್ನತ ಲೌಖಿಕ ಸಂಘಟನೆಯಾಗಿರುವ ಅಕಾಲ್ ತಖ್ತ್‌ಗೆ ತಾನು ಪತ್ರವೊಂದನ್ನು ಬರೆದಿದ್ದೆನೆಂದು ಟೈಟ್ಲರ್ ಹೇಳಿದ್ದರು.

ಆದರೆ, ಟೈಟ್ಲರ್‌ರಿಂದ ಯಾವುದೇ ಪತ್ರ ಬಂದಿರುವುದನ್ನು ಅಕಾಲ್ ತಖ್ತ್ ನಿರಾಕರಿಸಿದೆ.

1984ರ ಸಿಖ್ ಹತ್ಯಾಕಾಂಡ ಸಂತ್ರಸ್ತರ ಪ್ರಕರಣಗಳಲ್ಲಿ ಹೋರಾಡುತ್ತ ಬಂದಿರುವ ಎಎಪಿ ನಾಯಕ ಹಾಗೂ ಸುಪ್ರೀಂಕೋರ್ಟ್ ಹಿರಿಯ ವಕೀಲ ಎಚ್.ಎಸ್.ಫೂಲ್ಕಾ ಸಹ ಗುರುವಾರ ಆಕಾಶವಾಣಿಯಲ್ಲಿ ಮಾತನಾಡಿದ್ದಾರೆ. ತಾನು ಟೈಟ್ಲರ್‌ರ ವಿರುದ್ಧ ‘ಪುರಾವೆಯನ್ನು’ ನೀಡುವುದಕ್ಕಾಗಿ ಅಕಾಲ ತಖ್ತ್‌ನ ಜತೇದಾರ್ ಗ್ಯಾನಿ ಗುರ್ಬಚನ್ ಸಿಂಗ್‌ರೊಂದಿಗೆ ಭೇಟಿಯ ಅವಕಾಶವನ್ನು ಯಾಚಿಸಿದ್ದೆನೆಂದು ಅವರು ಹೇಳಿದ್ದಾರೆ.

ಆದಾಗ್ಯೂ, ಶುಕ್ರವಾರ ಎಚ್.ಟಿ ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಟೈಟ್ಲರ್, ಯಾವುದೇ ಕ್ಷಮಾಯಾಚನೆ ಪತ್ರ ಬರೆದಿರುವುದನ್ನು ನಿರಾಕರಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕ್ಯಾಲಿಫೋರ್ನಿಯದ ಸಿಖ್ ಸದ್ಗಹಸ್ಥರೊಬ್ಬರು ಅಕಾಲಿ ತಖ್ತ್ ಗೆ ತನ್ನ ನಿಲುವನ್ನು ಸ್ಪಷ್ಟ ಪಡಿಸುವಂತೆ ಸೂಚಿಸಿದ್ದರು.ಅವರ ಒತ್ತಾಸೆಯಂತೆ ತಾನು ತಪ್ಪಿತಸ್ಥನಲ್ಲವೆಂದು ವಿವರಿಸಿ, ಅಕಾಲ್ ತಖ್ತ್ ನ ವಿಳಾಸಕ್ಕೆ ಪತ್ರವೊಂದನ್ನು ಅವರಿಗೆ ಹಸ್ತಾಂತರಿಸಿದ್ದೆ.ತಾನು ಸಿಖ್ ಕುಟುಂಬಕ್ಕೆ ಸೇರಿದವನಾಗಿದ್ದೇನೆ.ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ನಡೆದ ದಿನ ತಾನು ಅಮೇಠಿಯಲ್ಲದೆ.ಮರುದಿನ ತಾನು ಅವರ ಪಾರ್ಥಿವ ಶರೀರದೊಂದಿಗೆ ಅನೇಕ ತಾಸುಗಳ ಕಾಲವಿದ್ದೆ.ಜನರು ಇಂದಿರಾರಿಗೆ ತಮ್ಮ ಅಂತಿಮ ಗೌರವ ಸಲ್ಲಿಸುತ್ತಿದ್ದರು.ಅದು ದೂರದರ್ಶನದಲ್ಲಿ ಪ್ರಸಾರವಾಗಿದೆಯೆಂದು ಪತ್ರದಲ್ಲಿ ಬರೆದಿದ್ದೆನೆಂದು ಟೈಟ್ಲರ್ ಹೇಳಿದ್ದಾರೆ.

ಮೂವರು ಸಿಖ್ಖರು ಸಜೀವ ದಹನವಾಗಿದ್ದು, 1984ರ ನವೆಂಬರ್ 1 ರಂದು ನಡೆದಿದ್ದ ದಿಲ್ಲಿಯ ಗುರುದ್ವಾರ ಪುಲ್ಬಂಗಳ್ ದಾಳಿಗೆ ಗುಂಪುಗಳನ್ನು ಪ್ರಚೋದಿಸುವಲ್ಲಿ ಟೈಟ್ಲರ್‌ರ ಪಾತ್ರದ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ. ಫೂಲ್ಕಾ ‘ಹಸಿ ಸುಳ್ಳುಗಳನ್ನು’ ಹರಡುತ್ತಿದ್ದಾರೆಂದು ಟೈಟ್ಲರ್ ಆರೋಪಿಸಿದ್ದಾರೆ.

ಅವರು ಪಂಜಾಬ್‌ನ ಮುಖ್ಯಮಂತ್ರಿಯಾಗುವ ಸಾಧ್ಯತೆಯನ್ನು ವೃದ್ಧಿಸುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ.ತನ್ನ ಹೆಸರನ್ನು ಸ್ವಚ್ಛಗೊಳಿಸಲು ತಾನು ಪಂಜಾಬಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವುದನ್ನು ಒಪ್ಪಿಕೊಂಡಿದ್ದೇನೆ.ತಾನು ತಪ್ಪಿತಸ್ಥನೆಂದು ಸಾಬೀತಾದರಷ್ಟೇ ಕ್ಷಮೆ ಕೇಳಬೇಕಾಗುತ್ತದೆಂದು ಟೈಟ್ಲರ್ ಪ್ರತಿಪಾದಿಸಿದ್ದಾರೆ.

ಎಬಿಪಿ ಸಾಂಝಾಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಟೈಟ್ಲರ್‌ರೇ ಅಕಾಲಿ ತಖ್ತ್‌ಗೆ ಪತ್ರ ಬರೆದಿರುವುದನ್ನು ಉಲ್ಲೇಖಿಸಿದ್ದಾರೆ. ಅವರು ಕ್ಷಮೆ ಕೇಳಲು ಸಿದ್ಧ ಎನ್ನುತ್ತಿರುವುದನ್ನು ವಾಹಿನಿ ಪ್ರಸಾರಿಸಿದೆ. ಅದಕ್ಕೆ ತಾನು ಪ್ರತಿಕ್ರಿಯಿಸಿದ್ದೇನೆ. ಪತ್ರದಲ್ಲಿ ಏನಿತ್ತೆಂಬುದು ತನಗೆ ಗೊತ್ತಿಲ್ಲ.ತಾನು ಅಕಾಲಿತಖ್ತ್‌ನ ಮುಖ್ಯಸ್ಥರಲ್ಲಿ ಸಮಯಾವಕಾಶವನ್ನು ಕೇಳಿದ್ದೇನೆ. ದಿಲ್ಲಿಯಲ್ಲಿ ಶುಕ್ರವಾರ ಅವರನ್ನು ಭೇಟಿಯಾಗ ಬಹುದೆಂದು ತನಗೆ ತಿಳಿಸಲಾಗಿತ್ತು. ಆದರೆ ಆ ಭೇಟಿ ರದ್ದಾಗಿದೆ.ಮುಂದಿನ ವಾರ ಅಮೃತಸರದಲ್ಲೇ ತಖ್ತ್ ಮುಖ್ಯಸ್ಥರ ಭೇಟಿಗೆ ಸಮಯಾವಕಾಶ ಕಲ್ಪಿಸಲಾಗುವುದೆಂದು ತನಗೆ ತಿಳಿಸಲಾಗಿದೆಯೆಂದು ಫೂಲ್ಕಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News