×
Ad

ಭಾರತದಲ್ಲಿ ಭಾರೀ ಹೂಡಿಕೆ ಸಿದ್ಧವಾದ ಸೌದಿ ತೈಲ ಕಂಪೆನಿ ಅರಾಮ್ಕೊ

Update: 2016-05-08 10:53 IST

ದಮ್ಮಾಮ್, ಮೇ 8: ಭಾರತದಲ್ಲಿ ಭಾರೀ ಹೂಡಿಕೆಗೆ ಸೌದಿ ಅರೇಬಿಯದ ತೈಲ ಕಂಪೆನಿಯಾದ ಸೌದಿ ಅರಾಮ್ಕೊ ಸಿದ್ಧವಾಗಿದೆ.ಭಾರತದ ಪಶ್ಚಿಮ ಕರಾವಳಿಯಲ್ಲಿ ಭಾರೀ ತೈಲ ಶುದ್ಧೀಕರಣ ಕೇಂದ್ರವನ್ನು ನಿರ್ಮಿಸಲಿದೆ.. ಮಾತ್ರವಲ್ಲ ದೇಶದ ಪ್ರಮುಖ ಪೆಟ್ರೋಕೆಮಿಕಲ್ ಕಂಪೆನಿಗಳ ಶೇರನ್ನು ಖರೀದಿಸುವ ಯೋಜನೆಯನ್ನೂ ಹಾಕಿಕೊಂಡಿದೆ ಎಂದು ವರದಿಯಾಗಿದೆ.

 ಒಟ್ಟು 300 ಕೋಟಿ ಡಾಲರ್ ಹೂಡಿಕೆ ಯೋಜನೆಯನ್ನು ಭಾರತಕ್ಕಾಗಿ ಸಿದ್ಧಪಡಿಸಲಾಗಿದೆ. ಕಳೆದ ತಿಂಗಳು ಪ್ರಸ್ತಾಪಿಸಲಾದ ವಿಷನ್ 2030ರ ಕರಡು ಯೋಜನೆ ಅಡಿಯಲ್ಲಿ ಆರಾಮ್ಕೊ ತನ್ನ ಕಾರ್ಯಕ್ಷೇತ್ರನ್ನು ವಿಸ್ತರಿಸಲಿದೆ. ಭಾರತವೂ ಸೌದಿ ಅರೇಬಿಯವೂ ಪರಸ್ಪರ ಇಂಧನ ಕ್ಷೇತ್ರದಲ್ಲಿ ಸಹಕಾರ ಹೆಚ್ಚಳಗೊಳಿಸುವ ವಿಚಾರವನ್ನು ಚರ್ಚಿಸುವುದಕ್ಕಾಗಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಹಿಂದೆ ರಿಯಾದ್‌ಗೆ ಹೋಗಿದ್ದರು ಎಂದು ವರದಿಗಳು ತಿಳಿಸಿವೆ.

  ಪ್ರತಿದಿನ 1.2 ದಶಲಕ್ಷ ಬ್ಯಾರಲ್ ಸಂಸ್ಕರಿಸುವ ಸಾಮರ್ಥ್ಯವಿರುವ ದೇಶದ ಅತೀ ದೊಡ್ಡ ರಿಫೈನರಿ ನಿರ್ಮಿಸುವುದಕ್ಕೆ ಪರಿಗಣನೆ ನೀಡಲಾಗುತ್ತದೆ. ದೇಶದ ಇಂಡಿಯನ್ ಆಯಿಲ್ ಕಾರ್ಪರೇಷನ್ ಹಿಂದುಸ್ಥಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಎಂಬಿವುಗಳ ಮುಂದಾಳುತ್ವದಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ಒಂದು ಲಕ್ಷ ಕೋಟಿ ರೂ. ಇದಕ್ಕಾಗಿ ಒಟ್ಟು ವ್ಯಯಿಸಲಾಗುವುದು. ಇದು ಸೌದಿ ಅರಾಮ್ಕೊ ಸಹಕಾರ ನೀಡಲು ಆಲೋಚಿಸಿರುವ ಪ್ರಧಾನ ಯೋಜನೆಯಾಗಿದೆ. ಜಗತ್ತಿನ ಅತಿ ದೊಡ್ಡ ತೈಲ ಕಂಪೆನಿ ಎಂಬ ನೆಲೆಯಲ್ಲಿ ಸೌದಿ ಅರಾಮ್ಕೊದ ಅನುಭವವನ್ನು ಬಳಸಿಕೊಳ್ಳಲು ಆಲೋಚಿಸಲಾಗಿದೆ. ಭಾರತ ಮತ್ತು ಒಮನ್‌ನ ಜಂಟಿ ರಿಫೈನರಿಯಾದ ಭಾರತ- ಓಮನ್ ರಿಫೈನರೀಸ್ ಲಿಮಿಟೆಡ್ ಮಧ್ಯಪ್ರದೇಶದ ಬಿನ್ ರಿಫೈನರಿಯಲ್ಲಿ ಕೂಡಾ ಅರಾಮ್ಕೊ ಸಹಕಾರ ಪಡೆಯುವ ವಿಚಾರ ಪರಿಗಣನೆಯಲ್ಲಿದೆ ಎಂದು ವರದಿಗಳು ತಿಳಿಸಿವೆ.

ಈ ತೈಲ ಶುದ್ಧಾಗಾರದ ಸಾಮರ್ಥ್ಯವನ್ನು ತುರ್ತಾಗಿ ಶೆ.30ರಷ್ಟು ಹೆಚ್ಚಳಗೊಳಿಸಿ 1,56,00 ಬ್ಯಾರೆಲ್‌ಗೇರಿಸಲು ಪ್ರಯತ್ನಿಸಲಾಗುವುದು. ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಲಿಮಿಟೆಡ್‌ನ(ಒಎನ್‌ಜಿಸಿ) ಗುಜರಾತ್‌ನ ಪೆಟ್ರೊಕೆಮಿಕಲ್ ಪ್ಲಾಂಟ್‌ನ ಇನ್ನೊಂದು ಯೋಜನೆ ಕೂಡಾ ಇದೆ. ಭಾರತ ಸಹಿತ ಏಶ್ಯನ್ ರಾಷ್ಟ್ರಗಳಲ್ಲಿ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಸೌದಿ ಅರಾಮ್ಕೊ ಯೋಜನೆಗಳನ್ನು ಹಾಕುತ್ತಿದೆ ಎಂದು ಅರಾಮ್ಕೊದ ಸಿಇಒ ಅಮೀನ್ ನಾಸರ್ ಹೇಳಿದ್ದಾರೆ.

 ಅಗತ್ಯವಿರುವ ಶುದ್ಧೀಕರಿಸದ ತೈಲದ ಶೇ. 70ರಷ್ಟು ಸೌದಿ ಸಹಿತ ಗಲ್ಫ್ ರಾಷ್ಟ್ರಗಳಿಂದ ಭಾರತ ಆಮದು ಮಾಡಿಕೊಳ್ಳುತ್ತಿದೆ. ಪ್ರತಿದಿನ ಸೌದಿ ಅರೇಬಿಯ ಸಹಿತ ಗಲ್ಫ್‌ರಾಷ್ಟ್ರಗಳು 8,89,000 ಬ್ಯಾರಲ್ ತೈಲವನ್ನು ಭಾರತಕ್ಕೆ ರಫ್ತು ಮಾಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News