×
Ad

ಮನೆಯಂಗಳದಲ್ಲಿ ಒಂದಿಷ್ಟು ನೀರಿಡೋಣ: ಮುಗ್ಧ ಪಕ್ಷಿಗಳ ಪ್ರಾಣ ಉಳಿಸೋಣ

Update: 2016-05-08 15:39 IST

ದಿನೇದಿನೇ ಹೆಚ್ಚುತ್ತಿರುವ ಬಿಸಿಲ ಝಲಕ್ಕೆ ಇಡೀ ದೇಶವೇ ಬರಗಾಲಕ್ಕೆ ತುತ್ತಾಗಿದ್ದು ನದಿ, ಕೊಳ, ಹಳ್ಳ ಸೇರಿದಂತೆ ನೀರಿನ ಮೂಲಗಳು ಸಂಪೂರ್ಣವಾಗಿ ಬತ್ತತೊಡಗಿವೆ. ಈ ನಡುವೆ ಅಂತರ್ಜಲ ಮಟ್ಟವೂ ಬಾರೀ ಕುಸಿತಕಂಡಿದ್ದು, ನೀರಿನ ಸೆಲೆಯಿಲ್ಲದೆ ಬಾವಿ, ಕೊಳವೆಬಾವಿಗಳು ಬರಿದಾಗಿವೆೆ. ಪರಿಣಾಮ ಮನುಷ್ಯರ ಮೇಲೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳು ಮೇವು, ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಪ್ರಸ್ತುತ ತಲೆದೋರಿರುವ ಬರಗಾಲದ ಈ ಸಮಯದಲ್ಲಿ ಮನುಷ್ಯನಾದರೋ ಲಭ್ಯವಿರುವ ನೀರನ್ನು ಮನೆಯಲ್ಲಿ ಶೇಖರಿಸಿ ಕುಡಿಯಲು ಹಾಗೂ ಇತರ ಬಳಕೆಗೆ ಉಪಯೋಗಿಸುತ್ತಾರೆ. ಪ್ರಯಾಣದ ವೇಳೆ ಕುಡಿಯಲು ನೀರು ದೊರೆಯಲಿದ್ದರೆ ಅಂಗಡಿಗಳಿಂದ ಹಣಕೊಟ್ಟು ಬಾಟಲಿ ನೀರನ್ನಾದರೂ ಖರೀದಿಸಿ ಕುಡಿಯುತ್ತಾರೆ. ಆದರೆ ಬಿಸಿಲ ಧಗೆಯಿಂದ ಹಳ್ಳ, ಕೊಳಗಳು ಬತ್ತಿರುವುದರಿಂದ ಕುಡಿಯಲು ನೀರು ಸಿಗದೆ ಅದೆಷ್ಟೋ ಮುಗ್ಧ ಪ್ರಾಣಿ-ಪಕ್ಷಿಗಳು ಪ್ರಾಣ ಬಿಡುತ್ತಿವೆ. ಅದರಲ್ಲೂ ಕುಡಿಯಲು ನೀರಿಲ್ಲದೆ ನಗರ, ಪಟ್ಟಣ ಪ್ರದೇಶದಲ್ಲಿ ಸಾವನ್ನಪ್ಪುವ ಪಕ್ಷಿಗಳ ಸಂಖ್ಯೆ ಅತ್ಯಧಿಕ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಅವುಗಳ ಪ್ರಾಣ ಸಂಕಟದಲ್ಲಿ ನಾವೂ ಭಾಗಿಯಾಗಬೇಕು. ಬಾಯಾರಿಕೆಯಿಂದ ಪ್ರಾಣ ಬಿಡುವ ಪ್ರಾಣಿ ಪಕ್ಷಿಗಳಿಗೆ ಒಂದಿಷ್ಟು ನೀರು ಒದಗಿಸುವ ಮೂಲಕ ಅವುಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು. ನಾವು ಮಾಡಬೇಕಿರುವುದು ಇಷ್ಟೇ... ಕುಡಿಯಲು ಹಾಗೂ ಇತರ ಬಳಕೆಗೆಂದು ನಾವು ಮನೆಯಲ್ಲಿ ಶೇಖರಿಸಿಟ್ಟಿರುವ ನೀರಿನಲ್ಲಿ ಬರೇ ಒಂದು ಮಗ್‌ನಷ್ಟು ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಮನೆಯ ಟೇರಸ್ ಮೇಲೆ ಅಥವಾ ಅಂಗಳದಲ್ಲಿ ಇಡಬೇಕು. ಇದರಿಂದ ಬಾಯಾರಿಕೆಯ ಬಳಲುವ ಅದೆಷ್ಟೋ ಪಕ್ಷಿಗಳ ಜೀವ ಉಳಿಯಬಹುದು. ಒಂದು ಕಡೆ ನೀರಿದೆ ಎಂದಾದರೆ ಪಕ್ಷಿಗಳು ದಿನನಿತ್ಯವೂ ಅದೇ ಜಾಗಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಕಾಗೆ ಸೇರಿದಂತೆ ದೊಡ್ಡ ಜಾತಿಯ ಪಕ್ಷಿಗಳು ನೀರಿರುವ ದೂರದ ಪ್ರದೇಶಗಳಿಗೆ ಹೋಗಿ ನೀರು ಕುಡಿಯುತ್ತದೆ. ಆದರೆ ಮನುಷ್ಯರ ಜೊತೆಯಲ್ಲೇ ಬದುಕುವ ಗುಬ್ಬಚ್ಚಿಯಂತಹ ಪುಟ್ಟಪುಟ್ಟ ಪಕ್ಷಿಗಳು ದೂರ ಹಾರಿ ಹೋಗಲಾರವು. ಗುಬ್ಬಚ್ಚಿಗಳು ಪುಟ್ಟ ಗಾತ್ರದ ಪಕ್ಷಿಯಾಗಿರುವುದರಿಂದ ಮನೆಯ ಟೇರಸ್ ಅಥವಾ ಅಂಗಳದಲ್ಲಿ ನೀರಿಡುವಾಗ ತುಂಬಾ ಆಳದ ಪಾತ್ರಗಳಲ್ಲಿ ಇಡಬೇಡಿ. ಗುಬ್ಬಚ್ಚಿಯಂತಹ ಪುಟ್ಟ ಪಕ್ಷಿಗಳ ಕಾಲುಗಳು ಮುಳುಗುವಷ್ಟು ಆಳದ ಹಾಗೂ ಅಗಳವಾದ ಪಾತ್ರೆಯಲ್ಲಿ ನೀರಿಟ್ಟರೆ ಉತ್ತಮ. ಇದರಿಂದ ಎಲ್ಲ ಪಕ್ಷಿಗಳಿಗೂ ನೀರು ಕುಡಿಯಲು ಸುಲಭವಾಗುತ್ತದೆ. ಸಾಧ್ಯವಾದರೆ ನೀರಿನ ಪಾತ್ರೆಯ ಹತ್ತಿರ ಒಂದಿಷ್ಟು ಅಕ್ಕಿ ಕಾಳುಗಳನ್ನೂ ಹಾಕಬಹುದು. ನೀವು ಹಾಕಿರುವ ಅಕ್ಕಿ ಕಾಳುಗಳನ್ನು ಹಾಕಿ, ಪಕ್ಷಿಗಳು ಬಂದು ಅವುಗಳನ್ನು ತಿಂದು ನೀರು ಕುಡಿಯುವುದನ್ನು ನೋಡುವುದರಿಂದ ಸಿಗುವ ಆನಂದವೇ ಬೇರೆ. ಮಾತ್ರವಲ್ಲದೆ ಆ ಸುಂದರ ದೃಶ್ಯವನ್ನು ನಿಮ್ಮ ಮೊಬೈಲ್ ಫೋನ್ ಕೆಮರಾದಲ್ಲಿ ಸೆರೆಹಿಡಿದು ನಿಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರಿಗೂ ಕಳುಹಿಸಬಹುದು. ಈ ಕ್ಷಣದಿಂದಲೇ ನೀರಿಡುವ ಮೂಲಕ ಪಕ್ಷಿಗಳ ಜೀವವನ್ನು ಉಳಿಸಲು ನಮ್ಮಿಂದಾಗುವ ಅಳಿಲು ಸೇವೆ ಸಲ್ಲಿಸೋಣ 

Writer - -ಇಮ್ತಿಯಾಝ್ ತುಂಬೆ

contributor

Editor - -ಇಮ್ತಿಯಾಝ್ ತುಂಬೆ

contributor

Similar News