×
Ad

ಬೆದರಿಸಿ ಟ್ವಿಂಕಲ್ ಟ್ವೀಟ್ ಡಿಲೀಟ್ ಮಾಡಿಸಿದ ಆರ್ಟ್ ಆಫ್ ಲಿವಿಂಗ್ !

Update: 2016-05-08 17:15 IST

ಮುಂಬೈ, ಮೇ 8: ಮಾಜಿ ಬಾಲಿವುಡ್ ನಟಿ , ಹಾಲಿ ಖ್ಯಾತ ಹಾಸ್ಯ ಲೇಖಕಿ ಹಾಗು ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ರ ಪತ್ನಿ ಟ್ವಿಂಕಲ್ ಖನ್ನಾ ಅವರ ಟ್ವೀಟ್ ಗಳಿಗೆ ಭಾರೀ ಬೇಡಿಕೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮುಕ್ತವಾಗಿ, ಹಾಸ್ಯ ಚಟಾಕಿಗಳೊಂದಿಗೆ ಆಕೆ ಮಾಡುವ ಟ್ವೀಟ್ ಸ್ಟೇಟ್ ಮೆಂಟ್ ಗಳು ಓದುಗರಲ್ಲಿ ನಗೆಯುಕ್ಕಿಸುವುದು ಖಚಿತ. ಆದರೆ ಟ್ವಿಂಕಲ್ ರ ಒಂದು ಟ್ವೀಟ್ ಮಾತ್ರ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಶಿಷ್ಯರಿಗೆ ನಗೆ ಬರಿಸುವ ಬದಲು ತೀವ್ರ ಸಿಟ್ಟು ಬರಿಸಿದೆ . ಎಲ್ಲಿವರೆಗೆಂದರೆ , ಟ್ವಿಂಕಲ್ ರಿಗೆ ಬೆದರಿಕೆ ಹಾಕುವಷ್ಟು ಮಟ್ಟಕ್ಕೆ ! ಕೊನೆಗೆ ಬೇರೆ ದಾರಿ ಕಾಣದೆ ಟ್ವಿಂಕಲ್ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಬೇಕಾಗಿದೆ .

 

ಇತ್ತೀಚಿಗೆ ನೊಬೆಲ್ ಹಾಗು ಮಲಾಲ ಕುರಿತು ರವಿಶಂಕರ್ ಅವರು ನೀಡಿದ ಹೇಳಿಕೆ ವ್ಯಾಪಕ ಚರ್ಚೆಗೊಳಗಾಗಿತ್ತು. ನೊಬೆಲ್ ಸಿಗದ್ದಕ್ಕೆ ಅವರು ನೊಬೆಲ್ ಪುರಸ್ಕೃತೆ ಮಲಾಲ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. 

ಇದೇ ಸಂದರ್ಭದಲ್ಲಿ ಟ್ವಿಂಕಲ್ ಕೂಡ ಒಂದು ಟ್ವೀಟ್ ಮಾಡಿದ್ದರು. ರವಿಶಂಕರ್ ಅವರು ಏನೇನೋ ಮಾತನಾಡಿ ಬಾಯಿಗೆ ಕಾಲು ಹಾಕಿಕೊಳ್ಳುವಂತಹ ಪರಿಸ್ಥಿತಿ ಮಾಡಿಕೊಂಡಿದ್ದಾರೆ ಎಂಬರ್ಥ ಬರುವ ಟ್ವೀಟ್ ಅದು ( ಕೆಳಗಿದೆ ) . 

ಆದರೆ ಈ ಟ್ವೀಟ್ ರವಿಶಂಕರ್ ಅವರ ಶಿಷ್ಯರನ್ನು ಕೆರಳಿಸಿದೆ. ತಕ್ಷಣ ಟ್ವಿಂಕಲ್ ವಿರುದ್ಧ ಮುಗಿಬಿದ್ದ ಅವರು ಅವರ ಪತಿ ಅಕ್ಷಯ್ ಅವರ ಹೊಸ ಚಿತ್ರ ಹೌಸ್ ಫುಲ್ 3 ನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸರಗೊಂಡ ಟ್ವಿಂಕಲ್ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿ " ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ . ನನ್ನ ತಪ್ಪು ತಿದ್ದಿಕೊಳ್ಳುವ ಪ್ರಜ್ಞಾವಂತಿಕೆ ನನಗಿದೆ " ಎಂದೂ ಬರೆದರು. ಆದರೆ ಇದರಿಂದ ತೃಪ್ತರಾಗದ ಶಿಷ್ಯರು ತಮ್ಮ ಬೆದರಿಕೆ ಮುಂದುವರಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಟ್ವಿಂಕಲ್ " ಆರ್ಟ್ ಆಫ್ ಲಿವಿಂಗ್ ಅಂದರೆ ಬೆದರಿಕೆಯ ತಂತ್ರವೇ " ಎಂದು ಟ್ವೀಟ್ ಮಾಡಿದ್ದಾರೆ. 

ಇಷ್ಟಾಗುವಾಗ ಟ್ವಿಂಕಲ್ ಅವರ ಡಿಲೀಟ್ ಮಾಡಲ್ಪಟ್ಟ ಟ್ವೀಟ್ ನ ಸ್ಕ್ರೀನ್ ಶಾಟ್ ಅನ್ನು ಬಳಸಿ ಸಾಕಷ್ಟು ಜನರು ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಒಟ್ಟಾರೆ ರವಿಶಂಕರ್ ಶಿಷ್ಯರ ಸಿಟ್ಟು ಅವರಿಗೇ ದುಬಾರಿಯಾಗಿದೆ. 

ಇತ್ತೀಚಿಗೆ ಯಮುನಾ ನದಿ ದಂಡೆಯಲ್ಲಿ ವರ್ಲ್ಡ್ ಕಲ್ಚರ್ ಫೆಸ್ಟಿವಲ್ ಹೆಸರಲ್ಲಿ ನಡೆಸಿದ ಬೃಹತ್ ಸಮಾವೇಶದಿಂದ ಸುತ್ತಮುತ್ತಲ ಪರಿಸರಕ್ಕೆ ಅಪಾರ ನಾಶ ನಷ್ಟವಾಗಿದೆ ಎಂದು ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ (ಎನ್ ಜಿ ಟಿ ) ರವಿಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡು 5 ಕೋಟಿ ದಂಡ ವಿಧಿಸಿತ್ತು. ಆದರೆ ಅದರಲ್ಲಿ ಕೇವಲ್ 25 ಲಕ್ಷ ಪಾವತಿಸಿದ ರವಿಶಂಕರ್ ಉಳಿದ ಮೊತ್ತ ಪಾವತಿಸುವುದಿಲ್ಲ ಎಂದು ಬಿಟ್ಟಿದ್ದಾರೆ. ಅವರ ಪ್ರಭಾವಕ್ಕೆ ಮಣಿದಿರುವ ಎನ್ ಜಿ ಟಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News