ಕಡಬ: ಖಾಸಗಿಯವರಿಂದ ಕೆರೆಗಳ ಅಕ್ರಮ ಒತ್ತುವರಿ ಆರೋಪ
ಕುಡಿಯುವ ನೀರಿಗೆ ಪರದಾಡಬೇಕಾದ ದಿನ ದೂರವಿಲ್ಲ
ಕಡಬ, ಮೇ.6. ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಮುಗಿಲುಮುಟ್ಟಿರುವಾಗಲೇ ಕಡಬ ಪರಿಸರದಲ್ಲೂ ನೀರಿನ ಅಭಾವ ತಲೆದೋರತೊಡಗಿದೆ. ಪರಿಸರದಲ್ಲಿ ಹರಿಯುತ್ತಿದ್ದ ನದಿಗಳೆಲ್ಲ ಬತ್ತಿ ಹೋಗಿದ್ದು, ಕುಡಿಯುವ ನೀರಿಗೂ ಪಾಡು ಪಡಬೇಕಾದ ಸಂಕಷ್ಟ ಎದುರಾಗಿದೆ. ಬಹಳ ಹಿಂದಿನಿಂದಲೂ ಕಡಬ ಪರಿಸರದಲ್ಲಿ ಕೃಷಿ ಹಾಗೂ ದಿನ ಬಳಕೆಗೆ ಕಡಬದ ಕೆರೆಯಿಂದಲೇ ನೀರನ್ನು ಉಪಯೋಗಿಸುತ್ತಿದ್ದರು. ಆದರೆ ಕಾಲಕ್ರಮೇಣ ಹೆಚ್ಚಿನ ಕೃಷಿಕರು ತಮ್ಮ ತಮ್ಮ ಜಮೀನಿನಲ್ಲೇ ಕೊಳವೆ ಬಾವಿ ಕೊರೆಯಲು ಪ್ರಾರಂಭಿಸಿದಂದಿನಿಂದ ಕೆರೆಯ ನೀರು ಯಾರಿಗೂ ಬೇಡವಾದಂದಿನಿಂದ ಕಡಬದ ಕೆರೆಯ ಹೂಳೆತ್ತುವ ಕಾರ್ಯವೂ ಸ್ಥಗಿತಗೊಂಡಿತು. ಕಡಬ ಹೋಬಳಿಯಲ್ಲಿ ಸುಮಾರು ಏಳು ಕೆರೆಗಳಿದ್ದು, ಅವೆಲ್ಲವೂ ಹೂಳೆತ್ತದೆ ಮೈದಾನದಂತಾಗಿವೆ. ಅದರಲ್ಲೂ ಕೆರೆ ಬದಿಯಲ್ಲಿನ ಪೊರಂಬೋಕು ಸ್ಥಳಗಳನ್ನು ಕೆಲವು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿಕೊಂಡಿದ್ದು, ಅಕ್ರಮ ಕಟ್ಟಡಗಳನ್ನು ಕಟ್ಟಿ ಯಾರದೇ ವಿರೋಧವಿಲ್ಲದೆ ಆರಾಮವಾಗಿದ್ದಾರೆ ಎನ್ನುವುದು ಸ್ಥಳೀಯರ ಆರೋಪ.
ಕಡಬ ಪೇಟೆಗೆ ಹೊಂದಿಕೊಂಡಂತೆ ಕಡಬ ಗ್ರಾಮದ ಹಳೇಸ್ಟೇಷನ್ ಎಂಬಲ್ಲಿ ಸ.ನಂ.209-2ರಲ್ಲಿ 2.38 ಎಕರೆ ಪ್ರದೇಶದಲ್ಲಿ ಕಡಬ ಕೆರೆಯೊಂದಿದ್ದು, ಅದರಲ್ಲಿ ಹೂಳು ತುಂಬಿಕೊಂಡಿದೆ. ಈ ಕೆರೆಯನ್ನು ವಿಂಗಡಿಸಿ ಸುಮಾರು ಎರಡು ಎಕರೆಯಷ್ಟು ಭೂಮಿಯನ್ನು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣಕ್ಕಾಗಿ ಕಾಯ್ದಿರಿಸಲಾಗಿದ್ದು, ಕೆರೆಗಳನ್ನು ಸಂರಕ್ಷಿಸಬೇಕೆನ್ನುವ ಸರಕಾರದ ಆದೇಶದಿಂದಾಗಿ ಈ ಪ್ರಸ್ತಾವನೆಯನ್ನು ತಡೆಹಿಡಿಯಲಾಗಿದೆ. ಆದರೆ ಕೆರೆಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿ ಕಡಬ ಬಯಲು ಪ್ರದೇಶದ ಭತ್ತ ಕೃಷಿಕರಿಗೆ ನೀರು ನೀಡಬೇಕೆನ್ನುವುದು ಪರಿಸರದ ಕೃಷಿಕರ ಆಗ್ರಹವಾಗಿದೆ. ಕೆರೆಯ ನೀರನ್ನು ಬಿಡಲು ನಿರ್ಮಿಸಿದ್ದ ಪಂಪ್ ಹೌಸ್ ದುರಸ್ಥಿ ಕಾಣದೆ ಹಾನಿಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ. ಹಲವು ವರ್ಷಗಳ ಹಿಂದೆ ಕಡಬ ಪಂಚಾಯತ್‌ನವರು ನೀಡಿದ್ದ ಹಲಗೆಯನ್ನಿಟ್ಟು ಪ್ರತೀ ವರ್ಷವೂ ಪರಿಸರದ ಕೃಷಿಕರೆಲ್ಲ ಒಟ್ಟು ಸೇರಿ ಹಲಗೆಯನ್ನು ಹಾಸಿ ಮಣ್ಣು ಹಾಕುವುದರ ಮೂಲಕ ನೀರಿಗೆ ತಡೆಹಾಕುತ್ತಿದ್ದು, ಜನವರಿ ಅಂತ್ಯದವರೆಗೆ ಕಡಬದ ಕೆರೆಯಲ್ಲಿ ನೀರು ನಿಲ್ಲುತ್ತಿದೆ. ಆದರೆ ಕೆರೆಯ ದುರಸ್ಥಿ ಕಾರ್ಯ ನಡೆದಲ್ಲಿ ಮಳೆಗಾಲ ಪ್ರಾರಂಭವಾಗುವವರೆಗೂ ಕೆರೆಯಲ್ಲಿ ನೀರನ್ನು ಶೇಖರಿಸಿಡಬಹುದೆನ್ನುವುದು ಹಿರಿಯರ ಮಾತು.
ಅದರ ಇನ್ನೊಂದು ಪಾರ್ಶ್ವದಲ್ಲಿ ಕುಟ್ರುಪ್ಪಾಡಿ ಗ್ರಾಮದ ಸ.ನಂ. 35ರಲ್ಲಿ ಒಟ್ಟು 6.30 ಎಕರೆ ವಿಸ್ತೀರ್ಣದಲ್ಲಿದೆ. ಇವೆರಡೂ ಕೆರೆಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ನಿಲ್ಲುತ್ತಿದ್ದು, ಬೇಸಿಗೆ ಕಾಲದಲ್ಲಿ ಕ್ರಿಕೆಟ್ ಸೇರಿದಂತೆ ಅನೇಕ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಕುಟ್ರುಪ್ಪಾಡಿ ಗ್ರಾಮದಲ್ಲಿರುವ ಕೆರೆಗೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಕಲ್ಲು ಹಾಗೂ ಮಣ್ಣು ತುಂಬುವುದರೊಂದಿಗೆ ಅನಾಯಾಸವಾಗಿ ಒತ್ತುವರಿಗೆ ಶ್ರಮಿಸುತ್ತಿದ್ದಾರೆ ಎನ್ನುವುದು ಕೆಲವರ ದೂರು. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಪರಿಶೀಲಿಸಿ ಕೆರೆಗಳ ಅತಿಕ್ರಮಣವಾಗಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದೇ ಅಥವಾ ಖಾಸಗಿ ಲಾಬಿಗೆ ಮಣಿಯಬಹುದೇ ಎಂದು ಕಾದುನೋಡಬೇಕಾಗಿದೆ.
------------------------------------
ಕಡಬದ ಕೆರೆಗಳ ಅತಿಕ್ರಮಣ ನಡೆದಿದೆಯೆನ್ನುವ ಆರೋಪಗಳು ಕೇಳಿಬಂದಿದ್ದು, ಪ್ರಸ್ತುತ ಸ್ಥಿತಿಗತಿ ಬಗ್ಗೆ ಪರಿಶೀಲಿಸಿ ಕೆರೆಗಳ ಒತ್ತುವರಿಯಾಗಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವು ಮಾಡಲಾಗುವುದು.
ಬಿ.ಲಿಂಗಯ್ಯ,
ಕಡಬ ತಹಶೀಲ್ದಾರ್
------------------------------------
ಕಡಬದ ಕೆರೆಯು ಪುರಾತನ ಕೆರೆಯಾಗಿದ್ದು, ಕಡಬ ಬಯಲಿನ ಕೃಷಿ ಕೆಲಸಕ್ಕೆ ಈ ಕೆರೆಯ ನೀರು ಸಾಕಾಗುತ್ತಿತ್ತು. ಆದರೆ ಈಗ ಈ ಕೆರೆಯು ಶಿಥಿಲಗೊಂಡಿದ್ದು, ಜಿಲ್ಲಾ ಪಂಚಾಯತ್‌ನಿಂದ ಬಿಡುಗಡೆಯಾಗಿರುವ ಹಣವು ಹಿಂದಿರುಗುವ ಮೊದಲು ಕೆರೆಯನ್ನು ದುರಸ್ಥಿಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಬೇಕು.
ದೇಜಪ್ಪ ಪೂಜಾರಿ, ಪೆಲತ್ತೋಡಿ
ಕೃಷಿಕ