×
Ad

ದೂರವಾಣಿ ಕದ್ದಾಲಿಕೆ,ಶಾಸಕರಿಗೆ ಬೆದರಿಕೆ : ರಾವತ್ ಆರೋಪ

Update: 2016-05-08 20:21 IST

ಡೆಹ್ರಾಡೂನ್,ಮೇ 8: ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಮುನ್ನ ಶಾಸಕರು ಮತ್ತು ನಾಯಕರಿಗೆ ಕಿರುಕುಳ ನೀಡಲು ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವರಿಗೆ ಬೆದರಿಕೆಯೊಡ್ಡಲಾಗುತ್ತಿದ್ದು, ಅವರ ಫೋನ್‌ಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಪದಚ್ಯುತ ಉತ್ತರಾಖಂಡ ಮುಖ್ಯಮಂತ್ರಿ ಹರೀಶ ರಾವತ್ ಅವರು ರವಿವಾರ ಇಲ್ಲಿ ಆರೋಪಿಸಿದರು.

 ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನಾನೋರ್ವ ರಾಷ್ಟ್ರವಿರೋಧಿಯೆಂಬಂತೆ ನನ್ನ ಮೇಲೂ ನಿಗಾ ಇರಿಸಲಾಗಿದೆ ಎಂದು ತಿಳಿಸಿದರು.

ತನ್ನ,ತನ್ನ ಸಂಬಂಧಿಗಳು ಮತ್ತು ಸಹಾಯಕರ ದೂರವಾಣಿಗಳನ್ನು ಕದ್ದಾಲಿಸಲಾಗುತ್ತಿದೆ. ಕೇಂದ್ರಿಯ ಸಂಸ್ಥೆಗಳು ನಾನಾ ವಿಧಗಳಲ್ಲಿ ಕಾಂಗ್ರೆಸ್ಸಿಗರಿಗೆ ಕಿರುಕುಳ ನೀಡುತ್ತಿವೆ. ಅವುಗಳನ್ನು ರಾಜಾರೋಷ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ನಮ್ಮ ಶಾಸಕರು ಮಾತ್ರವಲ್ಲ,ರಾಜಕೀಯ ನಾಯಕರಿಗೂ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ರಾವತ್ ‘ಕುದುರೆ ವ್ಯಾಪಾರ’ದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಕುಟುಕು ಕಾರ್ಯಾಚರಣೆಯ ಇನ್ನೊಂದು ವೀಡಿಯೊ ಬಿಡುಗಡೆಗೊಂಡ ದಿನವೇ ಅವರ ಈ ಹೇಳಿಕೆ ಹೊರಬಿದ್ದಿದೆ.

ವೀಡಿಯೊ ಕುರಿತು ಪ್ರಶ್ನಿಸಿದಾಗ,ತನಗೆ ಸದ್ಯಕ್ಕೆ ಆ ಬಗ್ಗೆ ಮಾಹಿತಿಯಿಲ್ಲ ಎಂದು ರಾವತ್ ಉತ್ತರಿಸಿದರು.

ವಿಧಾನಸಭೆಯಲ್ಲಿ ಎ.10ರಂದು ಬಲಾಬಲ ಪರೀಕ್ಷೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ ರಾವತ್, ಮಾಜಿ ಮುಖ್ಯಮಂತ್ರಿ ಹಾಗೂ ಬಂಡಾಯ ನಾಯಕ ವಿಜಯ ಬಹುಗುಣ ಮತ್ತು ಅವರ ಪುತ್ರ ಸಾಕೇತ್ ಅವರು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ತನ್ನ ಸರಕಾರವನ್ನು ಉರುಳಿಸಲು ಬಿಜೆಪಿ ನಾಯಕ ಕೈಲಾಶ ವಿಜಯವರ್ಗೀಯ ಜೊತೆ ಶಾಮೀಲಾಗಿದ್ದರು ಎಂದೂ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News