ಸೌದಿ ಅರೇಬಿಯದ ತೈಲ ಸಚಿವರನ್ನು ವಜಾಗೊಳಿಸಿದ ದೊರೆ
ರಿಯಾದ್, ಮೇ 9: ಜಾಗತಿಕ ತೈಲ ಬೆಲೆ ಕುಸಿತ ಸೌದಿ ಅರೇಬಿಯದ ಸರಕಾರಿ ವಲಯದಲ್ಲಿ ಭಾರೀ ತಲ್ಲಣಗಳನ್ನು ಸೃಷ್ಟಿಸಿರುವುದು ಸ್ಪಷ್ಟವಾಗಿದೆ. ಸುದೀರ್ಘ ಅವಧಿಯಲ್ಲಿ ದೇಶದ ತೈಲ ಸಚಿವರಾಗಿದ್ದ ಅಲಿ ಅಲ್-ನೈಮಿಯನ್ನು ದೊರೆ ಸಲ್ಮಾನ್ ಶನಿವಾರ ವಜಾಗೊಳಿಸಿದ್ದಾರೆ.
ಸೌದಿ ಅರೇಬಿಯದ ಆರ್ಥಿಕತೆಯು ತೈಲವನ್ನು ಅವಲಂಬಿಸುವುದನ್ನು ತಗ್ಗಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಸುಧಾರಣಾ ಯೋಜನೆಗಳನ್ನು ಸೌದಿ ಸರಕಾರ ಕಳೆದ ತಿಂಗಳು ಘೋಷಿಸಿದ ಬೆನ್ನಿಗೇ ಈ ಬೆಳವಣಿಗೆ ಸಂಭವಿಸಿದೆ.
ಎರಡು ದಶಕಗಳಿಗೂ ಅಧಿಕ ಅವಧಿಯಲ್ಲಿ ದೇಶದ ತೈಲ ಸಚಿವರಾಗಿದ್ದ ಅಲ್-ನೈಮಿ, ಒಪೆಕ್ ತೈಲ ಗುಂಪಿನಲ್ಲೇ ಅತ್ಯಂತ ಪ್ರಭಾವಿಯಾಗಿದ್ದರು.
ಆದರೆ, ಇತ್ತೀಚೆಗೆ ದೊರೆ ಸಲ್ಮಾನ್‌ರ ಮಗ ರಾಜಕುಮಾರ ಮುಹಮ್ಮದ್‌ರ ಹೆಚ್ಚುತ್ತಿರುವ ಪ್ರಭಾವದ ಹಿನ್ನೆಲೆಯಲ್ಲಿ ಅವರ ಪ್ರಭಾವ ಕುಂದಿದಂತೆ ಭಾಸವಾಗಿತ್ತು.
ನೈಮಿ ಸ್ಥಾನದಲ್ಲಿ ಖಾಲಿದ್ ಅಲ್-ಫಲಿಹ್‌ರನ್ನು ನೇಮಿಸಲಾಗಿದೆ. ಅವರು ಸರಕಾರಿ ಒಡೆತನದ ದೈತ್ಯ ತೈಲ ಕಂಪೆನಿ ಸೌದಿ ಅರಾಮ್ಕಾದಲ್ಲಿ ದೀರ್ಘಾವಧಿ ಮುಖ್ಯಸ್ಥರಾಗಿದ್ದರು. ಅವರು ಆರೋಗ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಇಂಧನ, ಉದ್ದಿಮೆ ಮತ್ತು ಖನಿಜ ಸಂಪನ್ಮೂಲಗಳು ಎಂಬ ವಿಸ್ತೃತ ಸಚಿವಾಲಯದ ಉಸ್ತುವಾರಿಯನ್ನು ಅವರು ವಹಿಸಿಕೊಳ್ಳಲಿದ್ದಾರೆ ಎಂದು ಸರಕಾರಿ ಮಾಧ್ಯಮ ಶನಿವಾರ ಘೋಷಿಸಿದ ರಾಜಾದೇಶ ತಿಳಿಸಿದೆ.