ಇನ್ನಷ್ಟು ಸಿರಿವಂತರ ಕಪ್ಪು ಹಣ ಬಯಲಿಗೆಳೆಯಲು ಹೊರಟ ಪತ್ರಕರ್ತರ ಗುಂಪು

Update: 2016-05-09 15:08 GMT

 ಪನಾಮ ಸಿಟಿ (ಪನಾಮ), ಮೇ 9: ಈಗಾಗಲೇ ಜಗತ್ತಿನಾದ್ಯಂತ ಸಂಚಲನ ಹುಟ್ಟಿಸಿರುವ ಪನಾಮ ಹಗರಣಗಳ ದಾಖಲೆಗಳ ಸೋರಿಕೆಯ ಪರಿಣಾಮ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆ ಹುಟ್ಟಿಕೊಂಡಿದೆ. ಅಗಾಧ ಪ್ರಮಾಣದ ಡಿಜಿಟಲ್ ದಾಖಲೆಗಳನ್ನು ತನ್ನ ಬಳಿ ಹೊಂದಿರುವ ಪತ್ರಕರ್ತರ ಗುಂಪೊಂದು ಇನ್ನಷ್ಟು ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲು ಸೋಮವಾರ ನಿರ್ಧರಿಸಿದೆ.

ಇಂಟರ್‌ನ್ಯಾಶನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ (ಐಸಿಐಜೆ) ಶೋಧಕ್ಕೆ ಲಭ್ಯವಿರುವ ಮಾಹಿತಿಕೋಶವೊಂದರಲ್ಲಿ ಮತ್ತಷ್ಟು ದಾಖಲೆಗಳನ್ನು ಸೋರಿಕೆ ಮಾಡಲಿದೆ. ಅದು ------- offshoreleaks.icij.org--------------  ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ.

ಸೋರಿಕೆಯು ವಿಕಿಲೀಕ್ಸ್ ಮಾದರಿಯಲ್ಲಿ ‘‘ಮಾಹಿತಿ ಎಸೆಯುವಿಕೆ’’ ಅಲ್ಲ ಎಂದು ಅಮೆರಿಕದಲ್ಲಿ ನೆಲೆ ಹೊಂದಿರುವ ಸಂಘಟನೆ ತಿಳಿಸಿದೆ. ತನ್ನ ಮಾಹಿತಿಗಳು ಶ್ರೀಮಂತ ವ್ಯಕ್ತಿಗಳು ಜಗತ್ತಿನಾದ್ಯಂತ ಸ್ಥಾಪಿಸಿರುವ 2 ಲಕ್ಷಕ್ಕೂ ಅಧಿಕ ವಿದೇಶಿ ಕಂಪೆನಿಗಳ ಹೆಸರುಗಳು ಮತ್ತು ಮಾಹಿತಿಯನ್ನು ಹೊಂದಿರುತ್ತದೆ ಎಂದು ಅದು ಹೇಳಿದೆ.

ಅಜ್ಞಾತ ಮೂಲವೊಂದು ಜರ್ಮನಿಯ ಪತ್ರಿಕೆ ‘ಸ್ವೆಡಾಶ್ ಝೀಟಂಗ್’ಗೆ ಒಂದು ವರ್ಷದ ಹಿಂದೆ ನೀಡಿದ ಬೃಹತ್ ಮಾಹಿತಿ ಕೋಶದಿಂದ ಆಯ್ದ ಮಾಹಿತಿಗಳಿ ಇವಾಗಿರುತ್ತವೆ.

ಮೊಸಾಕ್ ಫೊನ್ಸೆಕ ಎಂಬ ಪನಾಮದ ಕಾನೂನು ನೆರವು ಕಂಪೆನಿಯ ಸುಮಾರು ನಾಲ್ಕು ದಶಕಗಳ ಅವಧಿಯ ಮಾಹಿತಿ ಕೋಶದಿಂದ ಈ ಮಾಹಿತಿಗಳನ್ನು ಪಡೆಯಲಾಗಿದೆ. ಈ ಕಂಪೆನಿಯು ವಿದೇಶಗಳಲ್ಲಿ ಕಂಪೆನಿಗಳನ್ನು ಸೃಷ್ಟಿಸಿ ಅವುಗಳನ್ನು ನಡೆಸುವುದರಲ್ಲಿ ಪರಿಣತಿ ಹೊಂದಿದೆ.

ತನ್ನ ಕಂಪ್ಯೂಟರ್ ಮಾಹಿತಿ ಕೋಶಕ್ಕೆ ವಿದೇಶದಿಂದ ಕನ್ನ ಹಾಕಲಾಗಿದೆ ಎಂದು ಕಂಪೆನಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News