×
Ad

ಉತ್ತರಾಖಂಡ ಕುರಿತ ಆದೇಶದ ಪರಿಷ್ಕರಣೆ : ಕೇಂದ್ರದ ಮನವಿ ಒಪ್ಪಿದ ಸುಪ್ರೀಂ

Update: 2016-05-09 22:56 IST

 ಹೊಸದಿಲ್ಲಿ,ಮೇ 9: ಪದಚ್ಯುತ ಮುಖ್ಯಮಂತ್ರಿ ಹರೀಶ ರಾವತ್ ಅವರು ಮಂಗಳವಾರ ಉತ್ತರಾಖಂಡ ವಿಧಾನಸಭೆಯಲ್ಲಿ ವಿಶ್ವಾಸಮತ ನಿರ್ಣಯವನ್ನು ಮಂಡಿಸಲಿದ್ದು, ಸದನದಲ್ಲಿ ಬಲಾಬಲ ಪರೀಕ್ಷೆ ಸಂದರ್ಭ ಮತದಾನದ ಉಸ್ತುವಾರಿಯನ್ನು ಪ್ರಧಾನ ಕಾರ್ಯದರ್ಶಿ(ವಿಧಾನಸಭೆ ಮತ್ತು ಸಂಸದೀಯ ವ್ಯವಹಾರಗಳು)ಗಳು ವಹಿಸುವರು ಎಂದು ಸರ್ವೋಚ್ಚ ನ್ಯಾಯಾಲಯವು ಇಂದು ಸ್ಪಷ್ಟಪಡಿಸಿತು.

ಮೇ 6ರ ಆದೇಶವನ್ನು ಪರಿಷ್ಕರಿಸುವಂತೆ ಕೇಂದ್ರದ ಮನವಿಯನ್ನು ನ್ಯಾಯಮೂರ್ತಿಗಳಾದ ದೀಪಕ ಮಿಶ್ರಾ ಮತ್ತು ಶಿವಕೀರ್ತಿ ಸಿಂಗ್ ಅವರ ಪೀಠವು ಪುರಸ್ಕರಿಸಿತು. ಆದೇಶದಲ್ಲಿ ಅಧಿಕಾರಿಯ ಹುದ್ದೆಯನ್ನು ಪ್ರಧಾನ ಕಾರ್ಯದರ್ಶಿ(ವಿಧಾನಸಭೆ) ಎಂದು ಉಲ್ಲೇಖಿಸಲಾಗಿತ್ತು.

ರಾಜ್ಯದಲ್ಲಿ ಪ್ರಧಾನ ಕಾರ್ಯದರ್ಶಿ(ವಿಧಾನಸಭೆ)ಎಂಬ ಹುದ್ದೆಯಿಲ್ಲ ಮತ್ತು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟನೆಯನ್ನು ನೀಡಿದರೆ ಮಾತ್ರ ತಾವು ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಸಂಬಂಧಿತ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದಾರೆಂದು ಕೇಂದ್ರವು ತನ್ನ ಮನವಿಯಲ್ಲಿ ತಿಳಿಸಿತ್ತು.

ಮನವಿಯನ್ನು ವಿರೋಧಿಸಿದ್ದ ಕಾಂಗ್ರೆಸ್, ಪ್ರಧಾನ ಕಾರ್ಯದರ್ಶಿ(ವಿಧಾನಸಭೆ ಮತ್ತು ಸಂಸದೀಯ ವ್ಯವಹಾರಗಳು)ಗಳಿಗೆ ಅವಕಾಶ ನೀಡಿದರೆ ಅದು ವಿಧಾನಸಭೆಯಲ್ಲಿ ಹೊರಗಿನವರು ಪಾಲ್ಗೊಂಡಂತಾಗುತ್ತದೆ ಎಂದು ವಾದಿಸಿತ್ತು. ಸ್ಪೀಕರ್ ಅಧೀನದಲ್ಲಿರುವ ಕಾರ್ಯದರ್ಶಿ(ವಿಧಾನಸಭೆ)ಗಳಿಗೆ ಬಲಾಬಲ ಪರೀಕ್ಷೆಯ ಉಸ್ತುವಾರಿಯನ್ನು ಒಪ್ಪಿಸಬೇಕೆಂದು ಅದು ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News