ತೆಂಡುಲ್ಕರ್ ಪಾದ ಮುಟ್ಟಿದ ಯುವರಾಜ್
Update: 2016-05-09 23:09 IST
ಹೊಸದಿಲ್ಲಿ, ಮೇ 9: ಯುವರಾಜ್ ಸಿಂಗ್ ಐಪಿಎಲ್‌ನಲ್ಲಿ 100ನೆ ಪಂದ್ಯವನ್ನು ಆಡಿದ ಬಳಿಕ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.
ಯುವರಾಜ್ ರವಿವಾರ ವಿಶಾಖಪಟ್ಟಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ 100ನೆ ಐಪಿಎಲ್ ಪಂದ್ಯ ಆಡಿದ ಬಳಿಕ ಮೈದಾನದಲ್ಲೇ ಸಚಿನ್ ಕಾಲಿಗೆ ನಮಸ್ಕರಿಸಿದರು. ಯುವಿ ಅವರು ಸಚಿನ್‌ಗೆ ಕ್ರಿಕೆಟ್ ಮೈದಾನದಲ್ಲಿ ನಮಸ್ಕರಿಸುವುದು ಇದೇ ಮೊದಲಲ್ಲ. ಕಳೆದ ಮಾರ್ಚ್‌ನಲ್ಲಿ ಲಂಡನ್‌ನಲ್ಲಿ ನಡೆದ ಎಂಸಿಸಿ ಆಯೋಜಿತ ಪ್ರದರ್ಶನದ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಯುವಿ, ಸಚಿನ್ ಕಾಲಿಗೆ ಎರಗಿದ್ದರು.
ಈ ಇಬ್ಬರು ಆಟಗಾರರು ಸಂತೋಷ ಹಾಗೂ ಕಷ್ಟದ ಸಂದರ್ಭ,ಪಂದ್ಯದಲ್ಲಿ ಸೋಲು-ಗೆಲುವಿನ ಸಂದರ್ಭದಲ್ಲಿ ಪರಸ್ಪರ ಹುರಿದುಂಬಿಸಿಕೊಳ್ಳುತ್ತಾ ಬಂದಿದ್ದಾರೆ. 2011ರಲ್ಲಿ ಭಾರತ ವಿಶ್ವಕಪ್ ಜಯಿಸಿದಾಗ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಯುವರಾಜ್ ತನ್ನ ಯಶಸ್ಸಿನ ಎಲ್ಲ ಶ್ರೇಯಸ್ಸನ್ನು ತೆಂಡುಲ್ಕರ್‌ಗೆ ಸಮರ್ಪಿಸಿದ್ದರು.