×
Ad

ದಿಲ್ಲಿ-ಎನ್‌ಸಿಆರ್‌ನಲ್ಲಿ ಡೀಸೆಲ್ ಕಾರು ನೋಂದಣಿ ನಿಷೇಧ ಮುಂದುವರಿಕೆ

Update: 2016-05-09 23:56 IST

ಹೊಸದಿಲ್ಲಿ, ಮೇ 9: ದಿಲ್ಲಿ-ರಾಷ್ಟ್ರ ರಾಜಧಾನಿ ವಲಯದಲ್ಲಿ ಡೀಸೆಲ್ ಕಾರುಗಳ ನೋಂದಣಿಗೆ ವಿಧಿಸಿರುವ ನಿಷೇಧ ಮುಂದುವರಿಲಿದೆಯೆಂದು ಸುಪ್ರೀಂಕೋರ್ಟ್ ಸೋಮವಾರ ತಿಳಿಸಿದೆ.

ಮುಂದಿನ ಆದೇಶದವರೆಗೆ 2000 ಸಿಸಿಗಿಂತ ಮೇಲಿನ ಡೀಸೆಲ್ ವಾಹನಗಳ ನೋಂದಣಿಯ ಮೇಲಿನ ನಿಷೇಧ ಮುಂದುವರಿಯಲಿದೆಯೆಂದು ನ್ಯಾಯಾಲಯ ಹೇಳಿದೆಯೆಂದು ಸಿಎನ್‌ಎನ್ ನ್ಯೂಸ್ 18 ವರದಿ ಮಾಡಿದೆ.

ಆದಾಗ್ಯೂ, ದಿಲ್ಲಿ-ಎನ್‌ಸಿಆರ್‌ನಲ್ಲಿ ಬಿಪಿಒ ಉದ್ಯೋಗಿಗಳನ್ನು ಸಾಗಿಸುವ ಡೀಸೆಲ್ ಚಾಲಿತ ಅಖಿಲ ಭಾರತ ಪ್ರವಾಸಿ ಪರವಾನಿಗೆಯಿರುವ ಟ್ಯಾಕ್ಸಿಗಳನ್ನು ನಿಷೇಧಿಸಿರುವ ತನ್ನ ಆದೇಶವನ್ನು ಸಡಿಲಗೊಳಿಸಲು ಸುಪ್ರೀಂಕೋರ್ಟ್ ಒಪ್ಪಿದೆ.

2000 ಸಿಸಿ ಮತ್ತು ಅದಕ್ಕಿಂತ ಹೆಚ್ಚು ಇಂಜಿನ್ ಸಾಮರ್ಥ್ಯದ ಡೀಸೆಲ್ ಚಾಲಿತ ವಾಹನಗಳಿಗೆ ಮಾ.31ರವರೆಗೆ ನಿಷೇಧ ವಿಧಿಸಿ ನೀಡಿದ್ದ ತಾತ್ಕಾಲಿಕ ಆದೇಶವನ್ನು ನ್ಯಾಯಾಲಯ ಬಳಿಕ ಎ.30ವರೆಗೆ ವಿಸ್ತರಿಸಿತ್ತು.

ಮಾ.1ರೊಳಗೆ ಡೀಸೆಲ್ ಕ್ಯಾಬ್‌ಗಳನ್ನು ಸಿಎನ್‌ಜಿಗೆ ಪರಿವರ್ತಿಸುವಂತೆ ಅದು ಎನ್‌ಸಿಆರ್‌ನ ಕ್ಯಾಬ್ ನಿರ್ವಾಹಕರಿಗೆ ಮೊದಲು ಸೂಚಿಸಿತ್ತು. ಅಂತಿಮ ಗಡು ಬಳಿಕ ಮಾ.31 ಹಾಗೂ ಅನಂತರ ಎ.30ರವರೆಗೆ ವಿಸ್ತರಿಸಲ್ಪಟ್ಟಿತ್ತು.

ಆದಾಗ್ಯೂ, ವಿವಿಐವಿಗಳ ಭದ್ರತೆ ಸಹಿತ ವಿವಿಧ ಚಟುವಟಿಕೆಗಳಿಗೆ 197 ಹೆವಿ-ಡ್ಯೂಟಿ ವಾಹನಗಳ ಖರೀದಿಗೆ ದಿಲ್ಲಿ ಪೊಲೀಸ್‌ಗೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು.

ಆದರೆ, ವಾಹನಗಳ ಒಟ್ಟು ಬೆಲೆಯ ಶೇ.30ನ್ನು ಪರಿಸರ ಪರಿಹಾರ ಶುಲ್ಕವಾಗಿ ಪಾವತಿಸುವಂತೆ ಅದಕ್ಕೆ ನ್ಯಾಯಾಲಯ ಸೂಚಿಸಿತ್ತು.

ಡೀಸೆಲ್ ಕ್ಯಾಬ್‌ಗಳನ್ನು ಕಡಿಮೆ ಮಾಲಿನ್ಯದ ಸಿಎನ್‌ಜಿಗೆ ಪರಿವರ್ತಿಸುವ ಎ.30ರ ಗಡುವನ್ನು ವಿಸ್ತರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ ಬಳಿಕ, ನಗರದ ರಸ್ತೆಗಳಲ್ಲಿ ಡೀಸೆಲ್ ಚಾಲಿತ ಟ್ಯಾಕ್ಸಿಗಳ ಸಂಚಾರವನ್ನು ದಿಲ್ಲಿ ಸರಕಾರ ನಿಷೇಧಿಸಿತ್ತು.

ದಿಲ್ಲಿಯಲ್ಲಿ ಅಖಿಲ ಭಾರತ ಪರವಾನಿಗೆಯ ಸುಮಾರು 55 ಸಾವಿರ ಡೀಸೆಲ್ ಚಾಲಿತ ಟ್ಯಾಕ್ಸಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News