ಲಕ್ಯಾ ಡ್ಯಾಂನಿಂದ ತಾತ್ಕಾಲಿಕ 2 ಎಂಜಿಡಿ ನೀರು ಪೂರೈಕೆಗೆ ಮನವಿ:ಮೇಯರ್

Update: 2016-05-10 08:45 GMT

ಮಂಗಳೂರು, ಮೇ 10: ನಗರದಲ್ಲಿ ನೀರಿನ ಸಮಸ್ಯೆಯನ್ನು ಕೊಂಚ ಮಟ್ಟಿಗೆ ನಿಭಾಯಿಸುವ ಸಲುವಾಗಿ ಕುದುರೆಮುಖದ ಲಕ್ಯಾ ಡ್ಯಾಂನಿಂದ ತಾತ್ಕಾಲಿಕ ನೆಲೆಯಲ್ಲಿ 2 ಎಂಜಿಡಿ ನೀರು ಪೂರೈಸುವ ಕುರಿತಂತೆ ಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ ಎಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ನೀರಿನ ಸಮಸ್ಯೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮನಪಾದ ತಂಡ ನಿನ್ನೆ ಲಕ್ಯಾ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅಲ್ಲಿ ಸಾಕಷ್ಟು ನೀರು ಲಭ್ಯವಿರುವುದನ್ನು ಕಂಡಿದೆ. ಆ ನೀರನ್ನು ನಗರಕ್ಕೆ ಕುಡಿಯಲು ಪೂರೈಸಲು ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದೆ ಎಂದರು.

ಪ್ರಸ್ತುತ ಕಂಪನಿಯ ಮಂಗಳೂರು ಸ್ಥಾವರಕ್ಕೆ ದಿನಂಪ್ರತಿ 2 ಎಂಜಿಡಿ ನೀರು ಗುರುತ್ವಾಕರ್ಷಣ ಶಕ್ತಿ ಮೂಲಕ ಸರಬರಾಜು ಆಗುತ್ತಿದ್ದು, ಅದನ್ನು ಕುಡಿಯಲು ನೀಡಿದ್ದಲ್ಲಿ ಸುರತ್ಕಲ್, ಪಣಂಬೂರು, ಕೂಳೂರು, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಬಹುದು ಎಂದು ಅವರು ಹೇಳಿದರು.
ಈ ಬಗ್ಗೆ ಈಗಾಗಲೇ ಕುದುರೆಮುಖ ಕಂಪನಿಯ ಆಡಳಿತ ನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ಆಯುಕ್ತ ಡಾ. ಗೋಪಾಲಕೃಷ್ಣ ತಿಳಿಸಿದರು.

ನೀರು ಬಿಡಲಾಗುತ್ತಿದೆ- ಮನೆಗಳಿಗೆ ತಲುಪುತ್ತಿಲ್ಲ!

ಮೂರು ದಿನಗಳಿಗೊಮ್ಮೆ ನಗರಕ್ಕೆ ನೀರು ಪೂರೈಕೆ ಎಂದು ಹೇಳಿದ್ದರೂ ನಾಲ್ಕು ದಿನಗಳಾದರೂ ನೀರು ಪೂರೈಕೆಯಾಗಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಯರ್, ನೀರು ಬಿಡಲಾಗುತ್ತಿದೆ. ಆದರೆ ಪೈಪ್‌ಗಳಲ್ಲಿ ನೀರು ಹರಿವಿನ ಒತ್ತಡ ಸಾಕಷ್ಟು ಇಲ್ಲದಿರುವುದರಿಂದ ಕೆಲವೊಂದು ಕಡೆಗಳಿಗೆ ನೀರು ತಲುಪುತ್ತಿಲ್ಲ. ಅಂತಹ ಸ್ಥಳಗಳಿಗೆ ಟ್ಯಾಂಕರ್ ಹಾಗೂ ಇತರ ವಾಹನಗಳಲ್ಲಿ ಸಿಂಟೆಕ್ಸ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.

ತುಂಬೆ ಅಣೆಕಟ್ಟಿನಲ್ಲಿ 4.4 ಅಡಿ ನೀರು! ಕೆಲವೆಡೆ ಮಳೆಯ ಸಿಂಚನ

ತುಂಬೆ ಅಣೆಕಟ್ಟಿನಲ್ಲಿ ನಿನ್ನೆಯಿಂದ ನೀರು ಪಂಪಿಂಗ್ ಮಾಡಲಾಗುತ್ತಿದ್ದು, ಇಂದು ಮಧ್ಯಾಹ್ನದ ವೇಳೆಗೆ ನೀರಿನ ಮಟ್ಟ 4.4 ಅಡಿಗಳಿಗೆ ಇಳಿಕೆಯಾಗಿದೆ. ಈ ನಡುವೆ ನಿನ್ನೆ ನಗರದ ಕೆಲವೆಡೆ ಮಳೆಯ ಸಿಂಚನವಾಗಿದೆ. ತುಂಬೆಯಲ್ಲೂ ಮಳೆ ಹನಿ ಸುರಿದಿದೆ. ಸುಬ್ರಹ್ಮಣ್ಯದಲ್ಲೂ ಕಳೆದ ಕೆಲ ದಿನಗಳಿಂದ ಅಲ್ಪಸ್ವಲ್ಪ ಮಳೆಯಾಗಿದ್ದು, ತುಂಬೆಯಲ್ಲಿ ನೀರಿನ ಹರಿವಿನ ನಿರೀಕ್ಷೆ ಹುಟ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News