ಮುಸ್ಲಿಮರಿಗೆ ನಿಷೇಧ ನೀತಿಯಿಂದ ಲಂಡನ್ ಮೇಯರ್‌ಗೆ ವಿನಾಯಿತಿ: ಟ್ರಂಪ್
ವಾಶಿಂಗ್ಟನ್, ಮೇ 10: ತಾನು ಅಧ್ಯಕ್ಷನಾದರೆ ಅಮೆರಿಕಕ್ಕೆ ಮುಸ್ಲಿಮರ ಪ್ರವೇಶವನ್ನು ನಿಷೇಧಿಸುವುದು ಖಚಿತ, ಆದರೆ ಲಂಡನ್‌ನ ನೂತನ ಮೇಯರ್ ಸಾದಿಕ್ ಖಾನ್‌ಗೆ ನಿಷೇಧದಿಂದ ವಿನಾಯಿತಿ ನೀಡುತ್ತೇನೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಲಂಡನ್‌ನ ಪ್ರಥಮ ಮುಸ್ಲಿಂ ಮೇಯರ್ ಆಗಿ ಸಾದಿಕ್ ಖಾನ್ ಆಯ್ಕೆಯಾದ ಬಗ್ಗೆ ‘ದ ನ್ಯೂಯಾರ್ಕ್ ಟೈಮ್ಸ್’ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘‘ಅದನ್ನು ನೋಡಿ ನನಗೆ ಸಂತೋಷವಾಯಿತು. ಅದು ತುಂಬಾ ಒಳ್ಳೆಯದೆಂದು ನನಗನಿಸುತ್ತದೆ. ಅವರು ಉತ್ತಮ ಕೆಲಸವನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ’’ ಎಂದು ಹೇಳಿದರು.
ಲಂಡನ್‌ನ ಮೇಯರ್ ಟ್ರಂಪ್‌ರ ನೀತಿಗಳ ಟೀಕಾಕಾರರಾಗಿದ್ದಾರೆ. ಒಂದು ವೇಳೆ ಟ್ರಂಪ್ ಅಮೆರಿಕದ ಅಧ್ಯಕ್ಷನಾದರೆ ತನಗೆ ಅಮೆರಿಕಕ್ಕೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ಸಾದಿಖ್ ಖಾನ್ ಇದಕ್ಕೂ ಮೊದಲು ಹೇಳಿದ್ದರು.
ಆದರೆ, ಈ ಬಗ್ಗೆ ಕೇಳಿದಾಗ ಟ್ರಂಪ್ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ‘‘ಎಲ್ಲದಕ್ಕೂ ವಿನಾಯಿತಿಯಿದೆ’’ ಎಂದರು.
ಬ್ರಿಟಿಶ್ ಪ್ರಧಾನಿ ಡೇವಿಡ್ ಕ್ಯಾಮರೂನ್‌ರ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಮೇಯರ್ ಚುನಾವಣಾ ಪ್ರಚಾರದ ವೇಳೆ ಧಾರ್ಮಿಕ ಹಾಗೂ ಜನಾಂಗೀಯ ಗುಂಪುಗಳ ನಡುವೆ ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನಗಳನ್ನು ನಡೆಸಿದೆ ಎಂಬುದಾಗಿ ಪಾಕಿಸ್ತಾನ ಮೂಲದ ನೂತನ ಮೇಯರ್ ರವಿವಾರ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ. ಈ ಮಾದರಿಯ ಪ್ರಚಾರವನ್ನು ನೇರವಾಗಿ ಡೊನಾಲ್ಡ್ ಟ್ರಂಪ್‌ರ ಪುಸ್ತಕದಿಂದ ಎಗರಿಸಲಾಗಿದೆ ಎಂದು ಅವರು ಬಣ್ಣಿಸುತ್ತಾರೆ.
‘‘ವಿಭಿನ್ನ ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳನ್ನು ಪರಸ್ಪರ ಎತ್ತಿಕಟ್ಟಲು ಅವರು ಭೀತಿ ಮತ್ತು ಕೊಂಕು ಮಾತುಗಳನ್ನು ಬಳಸಿದರು. ಇದು ಡೊನಾಲ್ಡ್ ಟ್ರಂಪ್‌ರ ನಾಟಕ ಪುಸ್ತಕದಿಂದ ನೇರವಾಗಿ ಎತ್ತಿಕೊಂಡಿದ್ದು. ಆದರೆ, ಲಂಡನಿಗರು ಅದಕ್ಕಿಂತ ಹೆಚ್ಚಿನದಕ್ಕೆ ಅರ್ಹತೆ ಹೊಂದಿದ್ದಾರೆ. ತನ್ನ ಈ ಕೃತ್ಯವನ್ನು ಕನ್ಸರ್ವೇಟಿವ್ ಪಕ್ಷ ಇನ್ನೆಂದೂ ಪುನರಾವರ್ತಿಸುವುದಿಲ್ಲ ಎಂದು ನಾನು ಆಶಿಸುತ್ತೇನೆ’’ ಲೇಬರ್ ಪಕ್ಷದ ನಾಯಕ ಹೇಳಿದರು.
ವಿನಾಯಿತಿ ತಿರಸ್ಕರಿಸಿದ ಮೇಯರ್
ಮುಸ್ಲಿಮರಿಗೆ ಅಮೆರಿಕ ಪ್ರವೇಶ ನಿಷೇಧ ನೀತಿಯಿಂದ ತನಗೆ ವಿನಾಯಿತಿ ನೀಡುವ ಅಮೆರಿಕದ ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಕೊಡುಗೆಯನ್ನು ಲಂಡನ್ ಮೇಯರ್ ಸಾದಿಕ್ ಖಾನ್ ತಿರಸ್ಕರಿಸಿದ್ದಾರೆ.
ಟ್ರಂಪ್‌ರ ‘ಅಜ್ಞಾನ’ದಿಂದ ಕೂಡಿದ ಹೇಳಿಕೆಗಳು ‘‘ಭಯೋತ್ಪಾದಕರಿಗೆ ವರದಾನ’’ವಾಗಿ ಪರಿಣಮಿಸಿವೆ ಎಂದು ಅವರು ಹೇಳಿದ್ದಾರೆ. ‘‘ಇಸ್ಲಾಮ್ ಬಗ್ಗೆ ಟ್ರಂಪ್ ಹೊಂದಿರುವ ಅಜ್ಞಾನ ನಮ್ಮ ಎರಡೂ ದೇಶಗಳನ್ನು ಅಪಾಯಕ್ಕೆ ಗುರಿಮಾಡಬಹುದು. ಅದು ಪ್ರಪಂಚದಾದ್ಯಂತ ಇರುವ ಪ್ರಧಾನವಾಹಿನಿಯ ಮುಸ್ಲಿಮರನ್ನು ಪರಕೀಯರನ್ನಾಗಿಸುತ್ತದೆ ಹಾಗೂ ಭಯೋತ್ಪಾದಕರ ಹಾದಿಯನ್ನು ಸುಗಮಗೊಳಿಸುತ್ತದೆ’’ ಎಂದು ಸಾದಿಕ್ ಹೇಳಿದರು.