ಭಾರತ ಅತಿ ದೊಡ್ಡ ಇಂಧನ ಪ್ರಯೋಗಾಲಯ: ಅಮೆರಿಕ ರಾಯಭಾರಿ
Update: 2016-05-10 20:21 IST
ಹೊಸದಿಲ್ಲಿ, ಮೇ 10: ಭಾರತ ಜಗತ್ತಿನಲ್ಲೇ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಪ್ರಯೋಗಾಲಯವಾಗಿ ಹೊರಹೊಮ್ಮಿದೆ ಹಾಗೂ ಸ್ಮಾರ್ಟ್ ಗ್ರಿಡ್ ತಂತ್ರಜ್ಞಾನ ಬಳಕೆಯಲ್ಲಿ ಮುನ್ನಡೆಯಲ್ಲಿದೆ ಎಂದು ಭಾರತಕ್ಕೆ ಅಮೆರಿಕದ ರಾಯಭಾರಿ ರಿಚರ್ಡ್ ವರ್ಮ ಹೇಳಿದ್ದಾರೆ.
ವರ್ಮ ಮಂಗಳವಾರ ಟಾಟಾ ಪವರ್ ಡೆಲ್ಲಿ ಡಿಸ್ಟ್ರಿಬ್ಯೂಶನ್‌ನ ದಿಲ್ಲಿಯ ರೋಹಿಣಿಯಲ್ಲಿರುವ ಸ್ಮಾರ್ಟ್ ಗ್ರಿಡ್ ಲ್ಯಾಬ್ ಮತ್ತು ಅದೇ ಪರಿಸರದಲ್ಲಿರುವ ಟಾಟಾ ಪವರ್ ಡಿಡಿಎಲ್ ಗ್ರಿಡ್‌ಗೆ ಸಂಪರ್ಕ ಹೊಂದಿದ 225 ಕೆಡಬ್ಲು ಸೌರ ಶಕ್ತಿ ಸ್ಥಾವರಕ್ಕೆ ಭೇಟಿ ನೀಡಿದರು.
‘‘ಎಲ್ಲರ ಹಿತಕ್ಕಾಗಿ ಸ್ಮಾರ್ಟ್ ತಂತ್ರಜ್ಞಾನ ಬಳಕೆಯಲ್ಲಿ ಅಮೆರಿಕ ಸರಕಾರ, ಕಂಪೆನಿಗಳು ಮತ್ತು ಟಾಟಾ ಪವರ್ -ಡಿಡಿಎಲ್ ಕೈಜೋಡಿಸಿರುವುದನ್ನು ನೋಡಲು ಸಂತೋಷವಾಗುತ್ತದೆ’’ ಎಂದರು.
‘‘ವಿದ್ಯುತ್ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕಗಳ ನಡುವೆ ಸಹಯೋಗ ಏರ್ಪಡುವುದರಿಂದ, ತನ್ನ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ನೀಗಿಸಲು ಭಾರತಕ್ಕೆ ಸಹಾಯವಾಗುತ್ತದೆ’’ ಎಂದರು.