ವೈಫಲ್ಯವನ್ನೇ ಅವಕಾಶ ಮಾಡಿಕೊಂಡ ಅಥರ್ ಖಾನ್ ದೇಶಕ್ಕೇ ದ್ವಿತೀಯ ಸ್ಥಾನಿ
ಶ್ರೀನಗರ, ಮೇ 11: ವೈಫಲ್ಯವನ್ನೇ ಅವಕಾಶವನ್ನಾಗಿ ಮಾಡಿಕೊಂಡ ಅಥರ್ ಆಮೀರ್-ಉಲ್-ಶಫಿ ಖಾನ್, 2015ರ ಪ್ರತಿಷ್ಠಿತ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೇ ದ್ವಿತೀಯ ಸ್ಥಾನಿಯಾಗಿ ವಿಜಯದ ನಗೆ ಬೀರಿದ್ದಾರೆ.
23 ವರ್ಷದ ಖಾನ್ ಐಎಎಸ್ ಪರೀಕ್ಷೆಯಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. ನಾನು ಕಳೆದ ವರ್ಷ ಮೊದಲ ಪ್ರಯತ್ನ ಮಾಡಿದೆ. ಆದರೆ ನನ್ನ ರ್ಯಾಂಕಿಂಗ್ ಕಡಿಮೆಯಿತ್ತು. ನನಗೆ ಭಾರತೀಯ ರೈಲ್ವೆ ಟ್ರಾಫಿಕ್ ಸರ್ವಿಸ್ (ಐಆರ್‌ಟಿಎಸ್) ನಲ್ಲಿ ಉದ್ಯೋಗದ ಅವಕಾಶ ದೊರೆಯಿತು. ನಾನು ಅಲ್ಲಿ ಕೆಲಸಕ್ಕೆ ಸೇರಿದೆ. ಆದರೆ ಐಎಎಸ್ ಮಾಡುವುದೇ ನನ್ನ ಪ್ರಥಮ ಆದ್ಯತೆಯಾಗಿತ್ತು. ನಾನು ಎರಡಕ್ಕೂ ಸೂಕ್ತ ಪ್ಲಾನ್ ಮಾಡಿಕೊಂಡು ಮತ್ತೆ ತರಬೇತಿಗೆ ಹಾಜರಾಗಿ ಪರೀಕ್ಷೆ ಬರೆದೆ ಎನ್ನುತ್ತಾರೆ ಖಾನ್.
ಶ್ರೀನಗರದಿಂದ 60 ಕಿ.ಮೀ ದೂರದಲ್ಲಿರುವ ಅನಂತನಾಗ್ ಜಿಲ್ಲೆಯ ದೇವಿಪುರ-ಮಟ್ಟಾತ್‌ನ್ ಗ್ರಾಮದ ಈ ಹುಡುಗ, ಶಾಲಾ ಶಿಕ್ಷಕರೊಬ್ಬರ ಪುತ್ರ. 2009ರ ಸಿವಿಲ್ ಸರ್ವಿಸ್ ಪರೀಕ್ಷೆಗಳಲ್ಲಿ ಕಾಶ್ಮೀರ ಕಣಿವೆಯ ಶಾ ಫೈಝಲ್ ದೇಶಕ್ಕೇ ಮೊದಲ ಸ್ಥಾನಿಯಾದ ಬಳಿಕ ತನಗೂ ಐಎಎಸ್‌ಗೆ ಸೇರಬೇಕು ಎಂಬ ಆಸೆ ಬಂತು ಎಂದು ಹೇಳಿದ್ದಾರೆ.
ಕೋಚಿಂಗ್ ಕ್ಲಾಸುಗಳಿಗೆ ಹೋಗುವ ಉತ್ತಮ ಅವಕಾಶಗಳೇನೂ ನನಗಿರಲಿಲ್ಲ. ಆದರೆ ನಾನು ಅದನ್ನು ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಮಾತ್ರ ನನ್ನಲ್ಲಿತ್ತು. ವ್ಯಾಪಕ ಓದು ಮತ್ತು ಹಿಡಿದ ಕೆಲಸವನ್ನು ಮಾಡಿ ಮುಗಿಸುವ ಛಲ ನನ್ನ ಕನಸನ್ನು ಸಾಕಾರಗೊಳಿಸುವಲ್ಲಿ ನೆರವಾಯಿತು ಎಂದು ಅವರು ತಿಳಿಸಿದರು.
ಇದರ ಜತೆಗೆ, ಜನರ ನಡುವೆಯೇ ಇದ್ದುಕೊಂಡು ಜನರಿಗಾಗಿ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಮಹದಾಸೆ ತನ್ನದಾಗಿತ್ತು ಎಂದು ಅವರು ನುಡಿದರು.
ಖಾನ್ ತನ್ನ 11 ಮತ್ತು 12ನೇ ತರಗತಿಯನ್ನು ಶ್ರೀನಗರದ ಪ್ರತಿಷ್ಠಿತ ತ್ಯಾಂಡೇಲ್ ಬಿಸ್ಕೋಸ್ ಸ್ಕೂಲ್‌ನಲ್ಲಿ ಪೂರೈಸಿದರು. ಆಗ ತನಗೆ ಐಐಟಿ ಸೇರಿ ಬಿಇ ಮಾಡುವ ಆಸೆಯಿತ್ತು. ಆದರೆ ತನಗೆ ಬಿ-ಟೆಕ್ ಕೋರ್ಸ್ ನೀಡುವುದಾಗಿ ಹೇಳಲಾಯಿತು. ಇದೂ ಕೂಡ ನಾನು ಸಿವಿಲ್ ಸರ್ವಿಸ್ ಪರೀಕ್ಷೆಗೆ ಹಾಜರಾಗಬೇಕೆಂಬ ನನ್ನ ಆಸೆಗೆ ವೇಗವರ್ಧಕವಾಗಿ ಕೆಲಸ ಮಾಡಿತು ಎಂದು ಖಾನ್ ವಿವರಿಸಿದರು.
ಕಳೆದ ವರ್ಷ ಶಾ ಫೈಝಲ್ ಅವರನ್ನು ಭೇಟಿ ಮಾಡಿ ಸಿವಿಲ್ ಸರ್ವಿಸ್‌ಗೆ ಸೇರುವ ಬಗ್ಗೆ ಸಲಹೆ ಪಡೆದುಕೊಂಡೆ. ಸುದೀರ್ಘ ಸಮಾಲೋಚನೆ ಬಳಿಕ ನಾನು ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲೇಬೇಕೆಂದು ತೀರ್ಮಾನಿಸಿದೆ ಎಂದರು ಖಾನ್.
ಈ ನಡುವೆ, ತಮ್ಮ ಪುತ್ರನ ಸಾಧನೆಗೆ ಅಭಿನಂದಿಸಲು ಜನರ ಮಹಾಪೂರವೇ ಹರಿದು ಬರುತ್ತಿರುವುದನ್ನು ಕಂಡು ತಂದೆ ಮುಹಮ್ಮದ್ ಶಫೀಕ್ ಖಾನ್ ಸಂಭ್ರಮಪಡುತ್ತಿದ್ದಾರೆ. ಅವರು ಅನಂತನಾಗ್‌ನ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರ ಶಿಕ್ಷಕರು.
ಇಂದು ನಾನೊಬ್ಬ ಹೆಮ್ಮೆಯ ತಂದೆ. ತನ್ನ ಮಗ ಉನ್ನತ ಸಾಧನೆ ಮಾಡಬೇಕೆಂಬುದೇ ತಂದೆಯ ಜೀವನದ ಹೆಬ್ಬಯಕೆಯಾಗಿರುತ್ತದೆ. ನನ್ನ ಮಗ ಇಂದು ಅದನ್ನು ಪೂರೈಸಿದ್ದಾನೆ. ಅವನ ಕಠಿಣ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ಸಿಕ್ಕಿದೆ. ಅಲ್ಲಾ ನಮ್ಮ ಪ್ರಾರ್ಥನೆಯನ್ನು ಆಲಿಸಿದ್ದಾನೆ ಎಂದು ಶಫಿ ಖಾನ್ ಹೇಳಿದರು.