×
Ad

2.5 ಕೋಟಿ ಕಡು ಬಡವರಿಗೆ ಕೇಂದ್ರದಿಂದ ಉಚಿತ ಆಹಾರ ಧಾನ್ಯ

Update: 2016-05-11 08:56 IST

ಹೊಸದಿಲ್ಲಿ, ಮೇ 11: ಅಂತ್ಯೋದಯ ಅನ್ನ ಯೋಜನೆಯಡಿ (ಎಎವೈ) ಕೇಂದ್ರ ಸರಕಾರ ಸುಮಾರು 2.5 ಕೋಟಿ ಕಡು ಬಡವರಿಗೆ ಉಚಿತ ಆಹಾರ ಧಾನ್ಯ ವಿತರಿಸಲಿದೆ. ಸರಕಾರ ಅಧಿಕಾರದಲ್ಲಿ 2 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ತಾನು ಬಡವರ ಪರ ಎಂದು ಬಿಂಬಿಸಿಕೊಳ್ಳಲು ಈ ಯೋಜನೆಯನ್ನು ಬಳಸಿಕೊಳ್ಳಲು ಮುಂದಾಗಿದೆ.

 ಆಹಾರ ಭದ್ರತೆಯ ಹೊಸ ಯೋಜನೆಯಡಿ ಈ ಪ್ರಸ್ತಾವವನ್ನು ಆಹಾರ ಸಚಿವಾಲಯ ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಇರುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಯನ್ನು ಮತ್ತಷ್ಟು ಸುಧಾರಿಸುವ ಬಗ್ಗೆ ಪ್ರಧಾನಿ ಕಾರ್ಯಾಲಯ ಬುಧವಾರ ಸಭೆ ನಡೆಸಲಿದ್ದು, ಈ ಸಂದರ್ಭ ಹೊಸ ಪ್ರಸ್ತಾವ ಮಂಡಿಸಲಾಗುವುದು ಎಂದು ಮೂಲಗಳು ಹೇಳಿವೆ. ಪ್ರಸ್ತುತ ಎಎವೈ ಕುಟುಂಬವೊಂದಕ್ಕೆ ಪ್ರತಿ ತಿಂಗಳು 35 ಕೆ.ಜಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಉಳಿದವರನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 5 ಕೆ.ಜಿಯಂತೆ ವಿತರಿಸಲಾಗುತ್ತಿದೆ.

ಎರಡೂ ವರ್ಗಗಗಳಿಗೆ ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳನ್ನು ಕ್ರಮವಾಗಿ 3 ರೂ., 2 ರೂ., ಮತ್ತು 1 ರೂ. ದರದಲ್ಲಿ ವಿತರಿಸಲಾಗುತ್ತಿದೆ. ಗುರಿ ನಿರ್ದೇಶಿತ ಸಾರ್ವಜನಿಕ ವಿತರಣಾ ಪದ್ಧತಿಯಡಿ (ಟಿಡಿಪಿಎಸ್) ಎಎವೈ ಯನ್ನು 2000ದಲ್ಲಿ ವಾಜಪೇಯಿ ಸರಕಾರ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News