ನಮ್ಮ ಕೆಲಸ ಬೇಕಿದ್ದರೆ ನ್ಯಾಯಾಧೀಶರು ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಲಿ
ಹೊಸದಿಲ್ಲಿ, ಮೇ 11: ಮೂಲಸೌಕರ್ಯಗಳು, ರಸ್ತೆಗಳು ಮತ್ತು ಜಲ ಸಾರಿಗೆ ನನ್ನ ಪಾಲಿಗೆ ದೇಶಭಕ್ತಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮೋದಿ ಸರಕಾರ ಎರಡು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ತಾವೊಬ್ಬ ಅವಸರದಲ್ಲಿರುವ ಸಚಿವ ಎಂದು ಗಡ್ಕರಿ ಹೇಳಿಕೊಂಡಿದ್ದಾರೆ. ನಾನು ಮುಂದಿನ 3 ವರ್ಷಗಳಲ್ಲಿ 20-20 ಬ್ಯಾಟ್ಸ್‌ಮನ್‌ಗಳಂತೆ ಆಡಲು ಬಯಸುತ್ತೇನೆ ಎಂದಿರುವ ಅವರು ದಿನವೊಂದಕ್ಕೆ 40 ಕಿ.ಮೀ ಹೆದ್ದಾರಿ ನಿರ್ಮಾಣದ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಮರ್ಸಿಡಿಸ್ ಗುದ್ದೋಡು ಪ್ರಕರಣವನ್ನು ಉಲ್ಲೇಖಿಸುತ್ತ, ನೂತನ ಮೋಟಾರ್ ವಾಹನ ಕಾಯ್ದೆ ಜಾರಿಗೆ ತರಲು ವಿಫಲವಾಗಿದ್ದು ತಮ್ಮ ಅಧಿಕಾರಾವಧಿಯ ಕಪ್ಪುಚುಕ್ಕೆ ಎಂದು ಗಡ್ಕರಿ ಬಣ್ಣಿಸಿದರು. ಅಪ್ರಾಪ್ತ ವಯಸ್ಕ ಆರೋಪಿಯ ತಂದೆಗೆ ಕಠಿಣ ಶಿಕ್ಷೆವಿಧಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಐಪಿಎಲ್ ಪಂದ್ಯಗಳನ್ನು ಮಹಾರಾಷ್ಟ್ರದಿಂದ ಸ್ಥಳಾಂತರಿಸಿದ ಮುಂಬೈ ಹೈಕೋರ್ಟ್ ಆದೇಶವನ್ನು ಟೀಕಿಸಿದ ಅವರು, ನ್ಯಾಯಾಧೀಶರು ರಾಜಕೀಯ ಮಾಡಬಯಸುವುದಾದರೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿ ಮಂತ್ರಿಗಳಾಗಲಿ ಎಂದು ಸಲಹೆ ನೀಡಿದರು.