ಚಿಲ್ಲರೆ ಖರ್ಚಿನ, ವಿದ್ಯುತ್ ಬೇಡದ ಈ ಕೂಲರ್ ನಾವೂ ಯಾಕೆ ಬಳಸಬಾರದು ?
ಢಾಕಾ, ಮೇ 11: ಭಾರತದ ಹಲವೆಡೆ ಬಿಸಿಲಿನ ಝಳಕ್ಕೆ ಜನ ಬಸವಳಿದಿದ್ದಾರೆ. ಉಳ್ಳವರು ತಮ್ಮ ಮನೆ, ಕಚೇರಿಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಮಾಡಿಕೊಂಡು ಆರಾಮವಾಗಿದ್ದಾರೆ. ಆದರೆ ಬಡವರ ಗತಿಯೇನು? ಬಾಂಗ್ಲಾದೇಶದಲ್ಲಿ ಅಭಿವೃದ್ಧಿ ಪಡಿಸಲಾದ ಕೂಲರ್ ಒಂದು ಎಷ್ಟು ಮಿತವ್ಯಯಕಾರಿಯೆಂದರೆ ಅದಕ್ಕೆ ವಿದ್ಯುಚ್ಛಕ್ತಿಯ ಅಗತ್ಯವೇ ಇಲ್ಲವಾಗಿದೆ. ಹೆಚ್ಚೇಕೆ? ಅದನ್ನು ತಯಾರಿಸಲು ತಗಲುವ ವೆಚ್ಚ ಕೂಡ ಅತ್ಯಲ್ಪ.
ಭಾರತದಲ್ಲಿದ್ದಂತೆ ಬಾಂಗ್ಲಾದೇಶದಲ್ಲೂ ಗ್ರಾಮೀಣ ವಾಸಿಗಳು ಟಿನ್ ಶೀಟಿನಿಂದ ನಿರ್ಮಿತ ಮನೆಗಳಲ್ಲಿ ವಾಸವಾಗಿದ್ದಾರೆ. ಈ ಟಿನ್ ಶೀಟ್ ಮನೆಗಳ ಒಳಗೆ ವಿಪರೀತ ಸೆಕೆಯಿರುತ್ತದೆಯೆಂಬುದು ನಿರ್ವಿವಾದ. ಇಂತಹ ಮನೆಗಳಿಗೆ ವರದಾನವಾಗಿದೆ ಈ ‘ಇಕೋ ಕೂಲರ್.’ ಇದನ್ನು ತಯಾರಿಸುವುದು ಕೂಡ ಅಷ್ಟೇ ಸುಲಭ. ಇದು ಅರ್ಧ ತುಂಡರಿಸಿದ ಪ್ಲಾಸ್ಟಿಕ್ ಬಾಟಲಿಗಳಿಂದ ಮಾಡಲಾದ ಗ್ರಿಡ್ ಆಗಿದ್ದು ಕಿಟಿಕಿಯಲ್ಲಿ ಇದನ್ನು ಇಡಬಹುದಾಗಿದೆ. ಈ ಬಾಟಲಿಗಳ ಮೂಲಕ ಬಿಸಿ ಗಾಳಿ ಪ್ರವೇಶಿಸಿ ಅದರ ಕತ್ತಿನ ಭಾಗದಲ್ಲಿ ಈ ಬಿಸಿ ಗಾಳಿ ಒತ್ತಿ ನಿಂತು ತಂಪು ಗಾಳಿ ಮನೆಯೊಳಕ್ಕೆ ಪ್ರವೇಶಿಸುತ್ತದೆ.
ಕೋಣೆಯೊಂದರ ತಾಪಮಾನವನ್ನು 5 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆಗೊಳಿಸುವ ಶಕ್ತಿ ಈ ಇಕೋ ಕೂಲರ್ ಗೆ ಇದೆ. ಜಾಹೀರಾತು ಸಂಸ್ಥೆ ಗ್ರೇ ಬಾಂಗ್ಲಾದೇಶ್ ಹಾಗೂ ಢಾಕಾ ಮೂಲದ ಸಾಮಾಜಿಕ ಉದ್ಯಮ ಐಟಿ ಕಂಪೆನಿ ಗ್ರಾಮೀಣ್ ಇಂಟೆಲ್ ಸೋಶಿಯಲ್ ಬಿಸಿನೆಸ್ ಜಂಟಿಯಾಗಿ ಅಭಿವೃದ್ಧಿ ಪಡಿಸಿವೆ.
‘‘ಆರಂಭಿಕ ಪರೀಕ್ಷೆಗಳ ನಂತರ ಇಕೋ ಕೂಲರ್ ನ ಬ್ಲೂ ಪ್ರಿಂಟ್ ಗಳನ್ನು ಆನ್ ಲೈನ್ ನಲ್ಲಿ ಲಭ್ಯ ಮಾಡಲಾಗಿದ್ದು ಯಾರು ಕೂಡ ಉಚಿತವಾಗಿ ಡೌನ್ ಲೋಡ್ ಮಾಡಬಹುದಾಗಿದೆ. ಈ ಇಕೋ ಕೂಲರುಗಳು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು ಮಾತ್ರವಲ್ಲದೆ ಪರಿಸರ ಸ್ನೇಹಿ ಕೂಡ ಹೌದು,’’ಎನ್ನುತ್ತಾರೆ ಗ್ರೇ ಢಾಕಾದ ಆಡಳಿತ ಪಾಲುದಾರ ಸಯ್ಯದ್ ಗೌಸುಲ್ ಆಲಂ ಶಾಯೋನ್.
ಭಾರತದಲ್ಲೂ ಈ ಕೂರ್ ಬಳಕೆಗೆ ಅತ್ಯಂತ ಯೋಗ್ಯವಲ್ಲವೇನು?