×
Ad

ರೊಹಿಂಗ್ಯಗಳ ಬಗ್ಗೆ ಶಾಂತಿ ದೂತೆಯ ಹೇಡಿತನದ ನಿಲುವು

Update: 2016-05-11 19:47 IST

ಬೌದ್ಧ ಪ್ರಾಬಲ್ಯದ ಮ್ಯಾನ್ಮಾರ್‌ನಲ್ಲಿ ವಾಸಿಸುತ್ತಿರುವ ದೇಶರಹಿತ ರೊಹಿಂಗ್ಯ ಮುಸ್ಲಿಂ ಅಲ್ಪಸಂಖ್ಯಾತರ ಬಗ್ಗೆ ಹಾಗೂ ಅವರ ಬಗ್ಗೆ ದೇಶದ ಅಧಿನಾಯಕಿ ಆಂಗ್ ಸಾನ್ ಸೂ ಕಿ ತಳೆದಿರುವ ಧೋರಣೆಯ ಬಗ್ಗೆ ‘ನ್ಯೂಯಾರ್ಕ್ ಟೈಮ್ಸ್’ ತನ್ನ ಮೇ 9ರ ಸಂಚಿಕೆಯಲ್ಲಿ ಸಂಪಾದಕೀಯವೊಂದನ್ನು ಬರೆದಿದೆ. ಅದನ್ನು ಇಲ್ಲಿ ನೀಡಲಾಗಿದೆ:
ಬೌದ್ಧ ಬಹುಸಂಖ್ಯಾತರು ವಾಸಿಸುತ್ತಿರುವ ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಗಳು ಮುಸ್ಲಿಂ ಅಲ್ಪಸಂಖ್ಯಾತರು. ಅವರಿಗೆ ಪೌರತ್ವ, ಆರಾಧನೆಯ ಸ್ವಾತಂತ್ರ, ಶಿಕ್ಷಣ, ಮದುವೆ ಮತ್ತು ಪ್ರಯಾಣ- ಇವೇ ಮುಂತಾದ ಹೆಚ್ಚಿನ ಮೂಲಭೂತ ಹಕ್ಕುಗಳನ್ನು ವ್ಯವಸ್ಥಿತವಾಗಿ ನಿರಾಕರಿಸಲಾಗಿದೆ. 2012ರಲ್ಲಿ ಹಿಂಸೆಯ ಮೂಲಕ ಸಾವಿರಾರು ರೊಹಿಂಗ್ಯ ಮುಸ್ಲಿಮರನ್ನು ಅವರ ಮನೆಗಳಿಂದ ಹೊರಗೋಡಿಸಲಾಯಿತು. ಕಳೆದ ವರ್ಷ ಹಿಂಸಾಚಾರ ಮತ್ತು ಶೋಷಣೆಗಳಿಂದ ಪಾರಾಗಲು ನೂರಾರು ರೊಹಿಂಗ್ಯಗಳು ಸಮುದ್ರ ಪ್ರಯಾಣ ಕೈಗೊಂಡರು.
 ಮ್ಯಾನ್ಮಾರ್‌ನ ನಾಯಕಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂ ಕಿ ರೊಹಿಂಗ್ಯಗಳನ್ನು ಆ ಹೆಸರಿನಿಂದ ಕರೆಯಲು ಬಯಸುವುದಿಲ್ಲ. ಯಾಕೆಂದರೆ, ಅವರು ‘ಬಂಗಾಳಿಗಳು’ ಹಾಗೂ ಮ್ಯಾನ್ಮಾರ್‌ಗೆ ಸೇರಿದವರಲ್ಲ ಎಂಬ ಮಿಥ್ಯೆಯನ್ನು ಶಾಶ್ವತವಾಗಿಸಲು ‘‘ರಾಷ್ಟ್ರೀಯವಾದಿ’’ ಬೌದ್ಧರು ಬಯಸಿದ್ದಾರೆ. ಈ ಪದವನ್ನು ಬಳಸದಂತೆ ಸೂ ಕಿ ಅಮೆರಿಕದ ರಾಯಭಾರಿಗೂ ಸೂಚಿಸಿದ್ದಾರೆ. ಆದರೆ, ಅವರ ಈ ಸಲಹೆ ತಪ್ಪು ಹಾಗೂ ಭಾರೀ ನಿರಾಶಾದಾಯಕವಾದುದಾಗಿದೆ. ಸೂ ಕಿ ಹೇಗೆ ಬರ್ಮೀಯರೋ, ರೊಹಿಂಗ್ಯಗಳೂ ಪ್ರತಿ ಬಿಂದುವಿನಲ್ಲೂ ಬರ್ಮೀಯರು.
ಸಾರ್ವಜನಿಕವಾಗಿ ರೊಹಿಂಗ್ಯಗಳ ಪರವಾಗಿ ಇಲ್ಲವೆಂಬಂತೆ ತೋರಿಸಿಕೊಳ್ಳಲು ಅವರಿಗೆ ಸಾಕಷ್ಟು ಕಾರಣಗಳು ಇರಬಹುದು. ಅವರು 1962ರ ಬಳಿಕ ಮೊದಲ ಬಾರಿಗೆ ಮ್ಯಾನ್ಮಾರ್‌ನಲ್ಲಿ ಅಧಿಕಾರಕ್ಕೆ ಬಂದ ಚುನಾಯಿತ ಸರಕಾರದ ಸರಕಾರಿ ಸಲಹಾಕಾರ್ತಿಯ ಹುದ್ದೆಯನ್ನು ವಹಿಸಿ ಒಂದು ತಿಂಗಳಷ್ಟೇ ಆಗಿದೆ. ರೊಹಿಂಗ್ಯಗಳ ಪರವಾಗಿ ನಿಂತರೆ ‘ರಾಷ್ಟ್ರೀಯವಾದಿ’ ಬೌದ್ಧರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭೀತಿಯಲ್ಲಿ ಅವರು ಇದ್ದಾರೆ.
ಎಪ್ರಿಲ್ ಉತ್ತರಾರ್ಧದಲ್ಲಿ ದೋಣಿ ದುರಂತವೊಂದರಲ್ಲಿ ಮೃತಪಟ್ಟ ರೊಹಿಂಗ್ಯ ಕುಟುಂಬವೊಂದಕ್ಕೆ ಸಂತಾಪ ಹೇಳಿಕೆಯೊಂದನ್ನು ಅಮೆರಿಕ ರಾಯಭಾರ ಕಚೇರಿ ಬಿಡುಗಡೆ ಮಾಡಿತ್ತು. ಹೇಳಿಕೆಯಲ್ಲಿ ‘ರೊಹಿಂಗ್ಯ ಸಮುದಾಯ’ ಎಂಬುದಾಗಿ ಪ್ರಸ್ತಾಪಿಸಲಾಗಿತ್ತು. ಇದರಿಂದ ಆಕ್ರೋಶಿತರಾದ ‘ರಾಷ್ಟ್ರೀಯವಾದಿ’ ಬೌದ್ಧರು ಯಾಂಗನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದರು.
  ರೊಹಿಂಗ್ಯಗಳನ್ನು ಸಾರ್ವಜನಿಕವಾಗಿ ಅವರ ಸಮುದಾಯದ ಹೆಸರಿನಿಂದ ಕರೆದರೆ ರಾಷ್ಟ್ರೀಯ ಶಾಂತಿ ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಹೆದರಿಕೆ ಸೂ ಕಿಗೆ ಇರಬಹುದು ಎಂದು ವಿದೇಶ ಸಚಿವಾಲಯದ ಅಧಿಕಾರಿಯೊಬ್ಬರು ಹೇಳುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ, 2012ರಲ್ಲಿ ಪಶ್ಚಿಮ ರಾಖೈನ್ ರಾಜ್ಯದಲ್ಲಿ ಬೌದ್ಧರು ಮತ್ತು ರೊಹಿಂಗ್ಯ ಮುಸ್ಲಿಮರ ನಡುವೆ ನಡೆದ ಭಯಾನಕ ಹಿಂಸಾಚಾರ ಮರುಕಳಿಸಬಹುದು ಎಂಬ ಭೀತಿಯೂ ಅವರಿಗಿದೆ ಎನ್ನಲಾಗಿದೆ.
ಮ್ಯಾನ್ಮಾರ್‌ನ ಅತ್ಯಂತ ಬಡ ರಾಜ್ಯ ರಾಖೈನ್ ಜನಾಂಗೀಯ ಅತೃಪ್ತಿಗಳನ್ನು ಒಡಲಲ್ಲಿ ಹೊತ್ತುಕೊಂಡ ಟೈಮ್ ಬಾಂಬ್ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನು ನಿಭಾಯಿಸಲು ಅತ್ಯಂತ ಎಚ್ಚರಿಕೆಯ ರಾಜಕೀಯ ನೈಪುಣ್ಯತೆ ಬೇಕಾಗಿದೆ. ಆದರೆ, ವ್ಯವಸ್ಥಿತವಾಗಿ ನಡೆದುಕೊಂಡು ಬಂದಿರುವ ದಬ್ಬಾಳಿಕೆಯನ್ನು ಮುಂದುವರಿಸುವ ಮೂಲಕ ಹಾಗೂ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ರೊಹಿಂಗ್ಯಗಳನ್ನು ಕಡೆಗಣಿಸುವ ಮೂಲಕ ಇದನ್ನು ಮಾಡುವುದಲ್ಲ. ರೊಹಿಂಗ್ಯಗಳ ಹೆಸರನ್ನೂ ನಿರಾಕರಿಸುವ ಮೂಲಕ ಈ ಶಾಂತಿಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವುದಲ್ಲ.
ಆದರೆ, ಕೊನೆಗೆ, ಅಮೆರಿಕನ್ನರು ‘ರೊಹಿಂಗ್ಯ’ ಎಂದು ಹೇಳಬಾರದು ಎಂದು ಸೂ ಕಿ ಯಾಕೆ ಬಯಸುತ್ತಾರೆ ಎನ್ನುವುದು ಮುಖ್ಯವಾಗುವುದಿಲ್ಲ. ಒಂದು ತಲೆಮಾರಿನ ಅವಧಿಯಲ್ಲಿ ಯಾವ ಮಹಿಳೆಯ ಹೆಸರು ಮಾನವಹಕ್ಕುಗಳೊಂದಿಗೆ ಸಮ್ಮಿಳಿತವಾಗಿತ್ತೋ, ಯಾವ ಮಹಿಳೆ ನಿರಂಕುಶ ಆಡಳಿತದಲ್ಲೂ ಅಸಾಧಾರಣ ಧೈರ್ಯವನ್ನು ತೋರಿಸಿದ್ದರೋ ಅದೇ ಮಹಿಳೆ ಅಧಿಕಾರಕ್ಕೆ ಬಂದಾಗ ಸೇನಾ ಆಡಳಿತಗಾರರ ಅತ್ಯಂತ ಅಸ್ವೀಕಾರಾರ್ಹ ನೀತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಮುಖ್ಯವಾಗುತ್ತದೆ.
ಸೂ ಕಿ ತನ್ನ ನೀತಿಯನ್ನು ಮರು ಪರಿಶೀಲನೆ ಮಾಡಿಕೊಂಡರೆ ಜಾಣತನವಾಗುತ್ತದೆ. ದಶಕಗಳ ಕಾಲ ಜಗತ್ತಿನಿಂದ ಬಹಿಷ್ಕಾರಕ್ಕೆ ಒಳಗಾಗಿದ್ದ ಮ್ಯಾನ್ಮಾರ್ ಮತ್ತೆ ಜಗತ್ತಿನ ತೆಕ್ಕೆಗೆ ಪ್ರವೇಶ ಪಡೆಯಲು ಸಾಧ್ಯವಾಗಿದ್ದು ಆಕೆಯ ಸುತ್ತ ವ್ಯಾಪಿಸಿರುವ ಪ್ರಭಾವಲಯದಿಂದಾಗಿ. ಆದರೆ, ದೇಶದ ವಿರುದ್ಧದ ದಿಗ್ಬಂಧನೆಗಳ ಅವಧಿ ಮೇ 20ರಂದು ಮುಗಿಯುವ ಮುನ್ನ ಅದನ್ನು ನವೀಕರಿಸಿ ಎಂಬುದಾಗಿ ಅಮೆರಿಕದ ಮಾನವಹಕ್ಕು ಸಂಘಟನೆಗಳು ಈಗಾಗಲೇ ಅಧ್ಯಕ್ಷ ಬರಾಕ್ ಒಬಾಮರಿಗೆ ಮನವಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News