×
Ad

ಹಾಕಿ: ಅರ್ಜುನ ಪ್ರಶಸ್ತಿಗೆ ರಘುನಾಥ್, ರಾಣಿ ಶಿಫಾರಸು

Update: 2016-05-11 23:24 IST

ಹೊಸದಿಲ್ಲಿ, ಮೇ 11: ಪ್ರತಿಷ್ಠಿತ ಅರ್ಜುನ ಪ್ರಶಸಿ ಹಾಗೂ ಧ್ಯಾನ್‌ಚಂದ್ ಅವಾರ್ಡ್ಸ್ 2016ಗೆ ಶಿಫಾರಸುಗೊಂಡಿರುವ ಆಟಗಾರರ ಪಟ್ಟಿಯನ್ನು ಹಾಕಿ ಇಂಡಿಯಾ ಬುಧವಾರ ಪ್ರಕಟಿಸಿದೆ. ಕನ್ನಡಿಗ ವಿಆರ್ ರಘುನಾಥ್, ಧರ್ಮವೀರ್ ಸಿಂಗ್ ಹಾಗೂ ಮಹಿಳಾ ಹಾಕಿ ತಂಡದ ನಾಯಕಿ ರಿತು ರಾಣಿ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಸಿಲ್ವನಸ್ ಡುಂಗ್ ಡುಂಗ್ ಮೇಜರ್ ಧ್ಯಾನ್‌ಚಂದ್ ಜೀವಮಾನ ಸಾಧನಾ ಪ್ರಶಸ್ತಿ ಹಾಗೂ ಹಿರಿಯ ಕೋಚ್ ಸಿ.ಆರ್. ಕುಮಾರ್ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ.

ಸಿಲ್ವನಸ್ ಡುಂಗ್‌ಡುಂಗ್: 70ರ ಹರೆಯದ ಡುಂಗ್‌ಡುಂಗ್ 1980ರಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಭಾರತ ತಂಡದಲ್ಲಿದ್ದರು. 1976ರಲ್ಲಿ ಮಾಂಟ್ರಿಯಲ್ಲ ಒಲಿಂಪಿಕ್ಸ್‌ನಲ್ಲಿ ಭಾರತ ಪದಕ ಗೆಲ್ಲಲು ವಿಫಲವಾಗಿತ್ತು. 1980ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಸ್ಪೇನ್‌ನ ವಿರುದ್ಧ ನಿರ್ಣಾಯಕ ಗೋಲನ್ನು ಬಾರಿಸಿದ ಡುಂಗ್‌ಡುಂಗ್ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ವಿಆರ್ ರಘುನಾಥ್: ಕೊಡಗಿನ ಕುವರ ರಘುನಾಥ್ 2005ರಲ್ಲಿ ಹಾಕಿ ಕ್ರೀಡೆಗೆ ಪಾದಾರ್ಪಣೆಗೈದಿದ್ದರು. ಇದೀಗ ಅವರು ಭಾರತ ಹಾಕಿ ತಂಡದ ರಕ್ಷಣಾ ವಿಭಾಗದ ಪ್ರಮುಖ ಆಟಗಾರನಾಗಿದ್ದಾರೆ. ಭಾರತದ ಶ್ರೇಷ್ಠ ಡ್ರಾಗ್ ಫ್ಲಿಕರ್ ಆಗಿರುವ ರಘುನಾಥ್ ಭಾರತ ತಂಡ 2007ರ ಸುಲ್ತಾನ್ ಅಝ್ಲಾನ್ ಷಾ ಹಾಕಿ ಕಪ್‌ನಲ್ಲಿ ಕಂಚು, 2008ರಲ್ಲಿ ಬೆಳ್ಳಿ ಜಯಿಸಲು ಪ್ರಮುಖ ಪಾತ್ರವಹಿಸಿದ್ದರು. 2007ರಲ್ಲಿ ಏಷ್ಯಾಕಪ್‌ನಲ್ಲಿ ಚಿನ್ನ, 2013ರಲ್ಲಿ ಬೆಳ್ಳಿ ಜಯಿಸಲು ಕಾರಣರಾಗಿದ್ದ ರಘುನಾಥ್ ಈ ಟೂರ್ನಿಗಳಲ್ಲಿ 6 ಗೋಲುಗಳನ್ನು ಬಾರಿಸಿದ್ದರು. 2014ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನ ಜಯಿಸಿದ್ದಾಗ ರಘುನಾಥ್ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು. ಏಷ್ಯನ್ ಗೇಮ್ಸ್‌ನಲ್ಲಿ ಸುಮಾರು 3 ದಶಕಗಳ ನಂತರ ಚಿನ್ನ ಜಯಿಸಿದ್ದ ಭಾರತ ರಿಯೋ ಗೇಮ್ಸ್‌ನಲ್ಲಿ ಸ್ಥಾನ ಪಡೆದಿತ್ತು.

 ಧರ್ಮವೀರ್ ಸಿಂಗ್: ಭಾರತ ತಂಡದ ಪ್ರಮುಖ ಆಟಗಾರನಾಗಿರುವ ಧರ್ಮವೀರ್ ಸಿಂಗ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ತಂಡದ ಭಾಗವಾಗಿದ್ದರು. 2014ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಬೆಳ್ಳಿ ಜಯಿಸಲು ನೆರವಾಗಿದ್ದರು.

ರಿತು ರಾಣಿ: ಭಾರತದ ಪ್ರತಿಭಾವಂತ ಆಟಗಾರ್ತಿ ಹಾಗೂ ದಕ್ಷ ನಾಯಕಿಯಾಗಿರುವ ರಿತು ರಾಣಿ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಭಾರತ ತಂಡ 1980ರ ಬಳಿಕ ಮೊದಲ ಬಾರಿ ರಿಯೋ ಗೇಮ್ಸ್‌ನಲ್ಲಿ ಸ್ಥಾನ ಗಿಟ್ಟಿಸಲು ರಾಣಿ ಕಾಣಿಕೆ ನೀಡಿದ್ದಾರೆ.

ಸಿಆರ್ ಕುಮಾರ್: ಕಠಿಣ ಪರಿಶ್ರಮದ ಮೂಲಕ ದೀರ್ಘಕಾಲದಿಂದ ಭಾರತದ ಕಿರಿಯರ ತಂಡದ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ಕುಮಾರ್ 2011ರಲ್ಲಿ ಹೊಬರ್ಟ್‌ನಲ್ಲಿ ನಡೆದ ಜೂನಿಯರ್ ವಿಶ್ವಕಪ್‌ನಲ್ಲಿ ಜೂನಿಯರ್ ಪುರುಷರ ಹಾಕಿ ತಂಡ ಚಾಂಪಿಯನ್ ಆಗಲು ನೆರವಾಗಿದ್ದರು. ಇತ್ತೀಚೆಗಿನ ದಿನಗಳಲ್ಲಿ ಭಾರತದ ಹಿರಿಯ ಮಹಿಳಾ ತಂಡದ ಮುಖ್ಯ ಕೋಚ್ ನೀಲ್ ಹೌವುಡ್ ಅವರೊಂದಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News