×
Ad

‘ಪೋ ಮೋನೆ ಮೋದಿ’: ಕೇರಳಿಗರ ಆಕ್ರೋಶ

Update: 2016-05-11 23:35 IST

ತಿರುವನಂತಪುರ, ಮೇ 11: ಕೇರಳದಲ್ಲಿ ಬಿಜೆಪಿಯ ತಾರಾ ಪ್ರಚಾರಕರಾಗಿದ್ದ ಪ್ರಧಾನಿ ಮೋದಿ, ಇತ್ತೀಚೆಗಿನ ತನ್ನ ಚುನಾವಣಾ ಭಾಷಣವೊಂದರಲ್ಲಿ ಕೇರಳವನ್ನು ಸೊಮಾಲಿಯಕ್ಕೆ ಹೋಲಿಸಿದುದಕ್ಕಾಗಿ ಇಂದು ಟ್ವಿಟರ್‌ನಲ್ಲಿ ತೀವ್ರವಾಗಿ ಆಕ್ಷೇಪಿಸಲ್ಪಟ್ಟಿದ್ದಾರೆ.

   ಇಂದು ಮುಂಜಾವಿನ ಅಗ್ರ ಟ್ವಿಟರ್ ಪ್ರವೃತ್ತಿಗಳಲ್ಲಿ ‘ಪೋ ಮೋನೆ ಮೋದಿ’ ಎಂಬುದು ಮುಖ್ಯವಾದುದಾಗಿತ್ತು. ಅದು ಮಲಯಾಳ ಚಿತ್ರವೊಂದರ ಪ್ರಸಿದ್ಧ ಸಾಲು ‘ಪೋ ಮೋನೆ ದಿನೇಶ’ ಎಂಬುದರಿಂದ ಪ್ರಸಿದ್ಧಿ ಪಡೆದುದಾಗಿದೆ. ‘‘ಮಗನೇ ನಿನ್ನನ್ನು ಕಳುಹಿಸಿದ್ದೇವೆ. ಮನೆಗೆ ಹೋದರೆ ಒಳ್ಳೆಯದು’’ ಎಂಬುದು ಇದರ ಅರ್ಥವಾಗಿದೆ.

ಕೇರಳದಲ್ಲಿ ಸೋಮವಾರ ವಿಧಾನಸಭಾ ಚುನಾವಣೆ ನಡೆಯಲಿದೆ. ಮೂಲಭೂತ ಆರೋಗ್ಯ ಹಾಗೂ ಅಭಿವೃದ್ಧಿ ಅಂಶಗಳಲ್ಲಿ ಕೇರಳವು ಸೊಮಾಲಿಯಕ್ಕಿಂತಲೂ ಕೆಟ್ಟದಾಗಿದೆಯೆಂದು ಪ್ರಧಾನಿ ರವಿವಾರ ಹೇಳಿದ್ದರು. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಪ್ರಬಲವಾದ ದೂರು ಪತ್ರ ಬರೆದಿದ್ದು, ಅದು ನಿನ್ನೆ ಬಹಿರಂಗವಾಗಿದೆ.

ಕೇರಳದ ವಿರುದ್ದ ಆಧಾರ ರಹಿತ ಹೇಳಿಕೆಗಳನ್ನು ಹಿಂಪಡೆಯುವ ಮೂಲಕ ಸ್ವಲ್ಪ ರಾಜಕೀಯ ಸಜ್ಜನಿಕೆ ತೋರಿಸುವಂತೆ ಚಾಂಡಿ, ಮೋದಿಯವರಿಗೆ ಸೂಚಿಸಿದ್ದಾರೆ. ‘‘ನೀವು ನೀಡಿರುವ ಹೇಳಿಕೆಯು ವಾಸ್ತವದಿಂದ ದೂರವಾಗಿದೆ. ನೀವು ಕೇರಳವನ್ನು ಸೊಮಾಲಿಯಕ್ಕೆ ಹೋಲಿಸಿದ್ದೀರಿ. ಇದು ಒಬ್ಬ ಪ್ರಧಾನಿಗೆ ತಕ್ಕುದಲ್ಲ. ಅದು ಭಾರೀ ಆಕ್ರೋಶವನ್ನು ಸೃಷ್ಟಿಸಿದೆ’’ ಎಂದಿರುವ ಚಾಂಡಿ, ಸೊಮಾಲಿಯದಂತಹ ರಾಜ್ಯವೊಂದು ಈ ದೇಶದಲ್ಲಿದೆಯೆಂದು ಘೋಷಿಸುವುದು ಪ್ರಧಾನಿಗೆ ನಾಚಿಕೆಗೇಡಲ್ಲವೇ ಎಂದು ಪ್ರಶ್ನಿಸಿದ್ದಾರೆ. ಪ್ರವಾಸಿಗರಿಗೆ ‘ದೇವರ ಸ್ವಂತ ನಾಡು’ ಎಂದು ಬಿಂಬಿಸಲಾಗುತ್ತಿರುವ ಕೇರಳದಲ್ಲಿ ಇತ್ತೀಚೆಗೆ ನಡೆದಿರುವ ಕುಖ್ಯಾತ ಅಪರಾಧ ಕೃತ್ಯಗಳನ್ನು ಪ್ರಧಾನಿ ಉಲ್ಲೇಖಿಸಿದ್ದರು.

ಚುನಾವಣೆಯ ವೇಳೆಯೇ ವಿರೋಧಿ ಕಾರ್ಯಕರ್ತರು ಎಡಪಕ್ಷಗಳು ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ನಡೆಸಿದ್ದಾರೆ. ಕೆಲವು ವಾರಗಳ ಹಿಂದೆ ದಲಿತ ವಿದ್ಯಾರ್ಥಿನಿಯೋರ್ವಳನ್ನು ಆಕೆಯ ಮನೆಯಲ್ಲೇ ಬರ್ಬರವಾಗಿ ಅತ್ಯಾಚಾರ ನಡೆಸಿ ಕೊಲ್ಲಲಾಗಿತ್ತು. ದುಷ್ಕರ್ಮಿಗಳು ಅವಳ ಕರುಳನ್ನು ಬಗೆದಿದ್ದರು. ಪೊಲೀಸರು ಕಳೆದವಾರ ಶಂಕಿತನ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದರೂ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

 ಚಾಂಡಿ ಭ್ರಷ್ಟ ಆಡಳಿತದ ಆರೋಪ ಹೊತ್ತಿದ್ದು, ಎಡ ಪಕ್ಷಗಳು ಅವರನ್ನು ಕೆಳಗಿಳಿಸುವುದನ್ನು ತಡೆಯಲು ಪ್ರಯತ್ನಿಸುತ್ತಿವೆ. ಬಿಜೆಪಿ ತೃತೀಯ ರಂಗವೊಂದರ ನೇತೃತ್ವ ವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News