×
Ad

ಲಕ್ನೋ ವಿವಿಯ ಭದ್ರತಾ ಗಾರ್ಡ್‌ನ ಮಗ ಇನ್ನು ಜಿಲ್ಲಾ ಆರಕ್ಷಕ ವರಿಷ್ಠಾಧಿಕಾರಿ!

Update: 2016-05-11 23:41 IST

ಲಕ್ನೋ, ಮೇ 11: ಕುಲದೀಪ್ ದ್ವಿವೇದಿಗೆ ತಾನು ಯುಪಿಎಸ್ಸಿ ಪರೀಕ್ಷೆಯಲ್ಲಿ 242ನೆ ಸ್ಥಾನ ಪಡೆದಿದ್ದೇನೆ ಹಾಗೂ ಅದರ ಮಹತ್ವ ಏನು ಎಂದು ತನ್ನ ತಂದೆಗೆ ವಿವರಿಸಲು ಕನಿಷ್ಠ 30 ನಿಮಿಷ ತಗಲಿದೆ. ಏಕೆಂದರೆ ಲಕ್ನೋ ವಿವಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಕುಲದೀಪ್ ಅವರ ತಂದೆ ಸೂರ್ಯಕಾಂತ್ ದ್ವಿವೇದಿ ಪಾಲಿಗೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಎಂದರೆ ಬಹುದೊಡ್ಡ ಹುದ್ದೆ. ತನ್ನ ಮಗ ಈಗ ಇಡೀ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗುತ್ತಾನೆ ಎಂಬುದನ್ನು ಜೀರ್ಣಿಸಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ಬೇಕಾಯಿತು. ಆದರೆ ಒಮ್ಮೆ ಅದು ಅರ್ಥವಾದ ಮೇಲೆ ಅವರ ಸಂಭ್ರಮಕ್ಕೆ ಪಾರವಿರಲಿಲ್ಲ .

ಅವರಿಗೆ ಗೊತ್ತಿಲ್ಲದಂತೆ ಅವರ ಕಣ್ಣಾಲಿಗಳು ತುಂಬಿಕೊಂಡವು. ಅಲಹಾಬಾದ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಕುಲದೀಪ್ ಶಾಲಾ ಕಾಲೇಜು ದಿನಗಳಿಂದಲೇ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗುವ ಕನಸು ಪೋಷಿಸಿಕೊಂಡು ಬಂದವರು. ಬೇರೆ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅವರು ಪಾಸಾದರೂ ಅಲ್ಲಿ ಕರ್ತವ್ಯಕ್ಕೆ ಸೇರಲಿಲ್ಲ. ಗಡಿ ರಕ್ಷಣಾ ಪಡೆಯಲ್ಲಿ ಅಸಿಸ್ಟಂಟ್ ಕಮಾಂಡೆಂಟ್ ಆಗಿ ಆಯ್ಕೆಯಾದರೂ ಕುಲದೀಪ್ ಹೋಗಲಿಲ್ಲ. ಏಕೆಂದರೆ ಅವರ ಕಣ್ಣು ಐಎಎಸ್ ಅಥವಾ ಐಪಿಎಸ್ ಮೇಲೆಯೇ ನೆಟ್ಟಿತ್ತು. ಪರಿಶ್ರಮ, ಛಲ ಹಾಗೂ ದೃಢ ನಿರ್ಧಾರ ಫಲ ಕೊಟ್ಟಿದೆ. ಈಗ ಆ ಕನಸು ಸಾಕಾರವಾಗಿದೆ. ಮಗನ ಸಾಧನೆಗೆ ತಂದೆ ಸೂರ್ಯಕಾಂತ್ ಬೆರಗಾಗಿದ್ದಾರೆ. ಕಷ್ಟದ ದಿನಗಳನ್ನು ಕಂಡ ಅವರು ಇನ್ನು ಮಗ ನಮ್ಮ ಜೀವನ ಸುಧಾರಿಸುತ್ತಾನೆ ಎಂದು ಭರವಸೆ ಇಟ್ಟಿದ್ದಾರೆ . ತಾನು ಕಷ್ಟಪಟ್ಟು ಸಂಪಾದಿಸಿದ ಹಣ ಸರಿಯಾಗಿಯೇ ಬಳಕೆಯಾಯಿತು ಎಂಬುದು ಅವರ ಇನ್ನೊಂದು ಸಂತಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News