ಲಾತೂರಿಗೆ 6.20 ಕೋ.ಲೀ.ನೀರು ಪೂರೈಸಿದ್ದಕ್ಕೆ ನಾಲ್ಕು ಕೋ.ರೂ.ಬಿಲ್ ನೀಡಿದ ರೈಲ್ವೆ ಇಲಾಖೆ

Update: 2016-05-12 13:11 GMT

ಮುಂಬೈ,ಮೇ 12: ಒಂದು ತಿಂಗಳ ಹಿಂದೆ ಬರಪೀಡಿತ ಲಾತೂರಿಗೆ ಮಿರಜ್‌ನಿಂದ ನೀರನ್ನು ಹೊತ್ತ ಮೊದಲ ರೈಲು ಆಗಮಿಸಿದಾಗ ಅದು ಭಾರೀ ಸುದ್ದಿಯನ್ನು ಮಾಡಿತ್ತು. ಅಲ್ಲಿಂದೀಚೆಗೆ ರೈಲ್ವೆಯು ಒಟ್ಟೂ 6.20 ಕೋ.ಲೀ.ನೀರನ್ನು ಲಾತೂರಿಗೆ ಪೂರೈಸಿದೆ. ಇದರ ಸಾಗಾಣಿಕೆ ವೆಚ್ಚವಾಗಿ ಇದೀಗ ಬರೋಬ್ಬರಿ ನಾಲ್ಕು ಕೋ.ರೂ. ಬಿಲ್‌ನ್ನು ಲಾತೂರು ಜಿಲ್ಲಾಧಿಕಾರಿಗಳಿಗೆ ರವಾನಿಸಿದೆ.
ಜಿಲ್ಲಾಡಳಿತದ ಕೋರಿಕೆಯಂತೆ ನಾವು ಬಿಲ್‌ನ್ನು ಲಾತೂರು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೇವೆ. ನಮಗೆ ಹಣ ಪಾವತಿಸಬೇಕೋ ಅಥವಾ ಸೂಕ್ತ ಮಾರ್ಗಗಳ ಮೂಲಕ ವಿನಾಯಿತಿಯನ್ನು ಕೋರಬೇಕೋ ಎನ್ನುವುದು ಜಿಲ್ಲಾಡಳಿತವೇ ನಿರ್ಧರಿಸಬೇಕು ಎಂದು ಮಧ್ಯ ರೈಲ್ವೆಯ ಮಹಾ ಪ್ರಬಂಧಕ ಎಸ್.ಕೆ.ಸೂದ್ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಜಲದೂತ’ ಹೆಸರಿನ ನೀರನ್ನು ಹೊತ್ತಿದ್ದ ಮೊದಲ ರೈಲು ಎ.11ರಂದು ಮಿರಜ್‌ನಿಂದ ಹೊರಟು 342 ಕಿ.ಮೀ.ದೂರದ ಲಾತೂರನ್ನು ಮರುದಿನ ತಲುಪಿತ್ತು.
10 ವ್ಯಾಗನ್‌ಗಳ ರೈಲು ಒಂಬತ್ತು ಟ್ರಿಪ್‌ಗಳನ್ನು ಪೂರೈಸಿದ ನಂತರ 25 ಲ.ಲೀ.ಸಾಮರ್ಥ್ಯದ 50 ವ್ಯಾಗನ್‌ಗಳ ರೈಲನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಅದನ್ನು ಲಾತೂರಿಗೆ ನೀರು ಪೂರೈಕೆಗಾಗಿಯೇ ರಾಜಸ್ಥಾನದ ಕೋಟಾದಿಂದ ವಿಶೇಷವಾಗಿ ಆರಂಭಿಸಲಾಗಿತ್ತು.
ಮಹಾರಾಷ್ಟ್ರ ಸರಕಾರವು 2013,ಜನವರಿಯಲ್ಲಿ ಬರಪೀಡಿತ ಮರಾಠವಾಡಾ ಪ್ರದೇಶಕ್ಕೆ ರೈಲುಗಳ ಮೂಲಕ ನೀರು ಪೂರೈಸುವ ಬಗ್ಗೆ ಮೊದಲ ಬಾರಿಗೆ ಪರಿಶೀಲಿಸಿತ್ತು. ಪ್ರತಿ ದಿನ ಐದು ಲಕ್ಷ ಲೀ.ನೀರು ಪೂರೈಕೆಗೆ ವ್ಯಾಗನ್‌ಗಳ ವ್ಯವಸ್ಥೆಗಾಗಿ ರೈಲ್ವೆಯೊಂದಿಗೆ ಚರ್ಚೆಗಳನ್ನು ನಡೆಸಲಾಗಿತ್ತು.
ಲಾತೂರು ನಗರವು ನಾಲ್ಕು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದರೆ ಜಿಲ್ಲೆಯ ಗ್ರಾಮೀಣ ಪ್ರದೇಶವು 943 ಗ್ರಾಮಗಳೊಂದಿಗೆ 18 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಜಿಲ್ಲೆಯಲ್ಲಿಯ 131 ಸಣ್ಣಪುಟ್ಟ ಜಲಾಶಯಗಳಲ್ಲಿಯ ನೀರಿನ ಮಟ್ಟ ತೀರ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News