×
Ad

ಇರಾನ್‌ನಿಂದ ಈ ಬಾರಿ ಯಾರೂ ಹಜ್‌ಗೆ ಹೋಗುವುದಿಲ್ಲ : ಸಂಸ್ಕೃತಿ ಸಚಿವ ಘೋಷಣೆ

Update: 2016-05-12 19:00 IST

ಟೆಹರಾನ್, ಮೇ 12: ವಾರ್ಷಿಕ ಹಜ್ ಯಾತ್ರೆಗಾಗಿ ಇರಾನ್ ಈ ವರ್ಷ ಸೌದಿ ಅರೇಬಿಯಕ್ಕೆ ತನ್ನ ಯಾತ್ರಿಗಳನ್ನು ಕಳುಹಿಸುವುದಿಲ್ಲ ಎಂದು ಇರಾನ್‌ನ ಸಚಿವರು ಗುರುವಾರ ಘೋಷಿಸಿದ್ದಾರೆ.

ಕಳೆದ ವರ್ಷದ ಹಜ್ ಅವಧಿಯಲ್ಲಿ ನಡೆದ ದುರಂತದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ಎರಡು ರಾಷ್ಟ್ರಗಳ ನಡುವೆ ಹುಟ್ಟಿಕೊಂಡ ಉದ್ವಿಗ್ನತೆ ಮತ್ತೆ ಮುನ್ನೆಲೆಗೆ ಬಂದಿರುವ ಸೂಚನೆ ಇದಾಗಿದೆ.

ಮಿನಾದಲ್ಲಿ ಬೃಹತ್ ಕ್ರೇನೊಂದು ಕುಸಿದು ಕನಿಷ್ಠ 2,426 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

ಕಳೆದ ವರ್ಷ ಸೆಪ್ಟಂಬರ್ 24ರಂದು ನಡೆದ ಕ್ರೇನ್ ಕುಸಿತ ಹಾಗೂ ಬಳಿಕ ನಡೆದ ಕಾಲ್ತುಳಿತಕ್ಕೆ ಸೌದಿಯ ಅಸಮರ್ಥತೆಯೇ ಕಾರಣ ಎಂದು ಇರಾನ್ ಹೇಳಿದೆ. ಆ ದುರಂತದಲ್ಲಿ ತನ್ನ ದೇಶದ 464 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದಿದೆ.

ಹಜ್ ಅವಧಿಯಲ್ಲಿ ಒದಗಿಸಬೇಕಾದ ಭದ್ರತೆ ಕುರಿತಂತೆ ಇರಾನ್ ಮತ್ತು ಸೌದಿ ಅರೇಬಿಯಗಳ ನಡುವೆ ತಿಂಗಳುಗಳ ಕಾಲ ಮಾತುಕತೆ ನಡೆದಿವೆ. ಆದರೆ, ಮಾತುಕತೆಯಲ್ಲಿ ಯಾವುದೇ ಪ್ರಗತಿ ಸಂಭವಿಸಿಲ್ಲ ಎಂದು ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವ ಅಲಿ ಜನ್ನತಿ ಹೇಳಿದರು.

‘‘ಮಾತುಕತೆ ಹಳಿ ತಪ್ಪಲು ಸೌದಿಗಳೇ ಕಾರಣ’’ ಎಂದು ಸಚಿವರು ಹೇಳಿದ್ದಾರೆ ಎಂದು ಸರಕಾರಿ ಒಡೆತನದ ವಾರ್ತಾ ಸಂಸ್ಥೆ ‘ಇರ್ನ’ ವರದಿ ಮಾಡಿದೆ. ‘‘ಇರಾನ್ ಯಾತ್ರಿಕರಿಗೆ ನೀಡಬೇಕಾದ ವೀಸಾಗಳು, ಭದ್ರತೆ ಮತ್ತು ಸಾರಿಗೆ ವ್ಯವಸ್ಥೆಯ ಬಗ್ಗೆ ನಾವು ನೀಡಿದ ಪ್ರಸ್ತಾಪಗಳನ್ನು ಅವರು ಒಪ್ಪಿಕೊಳ್ಳಲಿಲ್ಲ’’ ಎಂದರು.

ಪ್ರಭಾವಶಾಲಿ ಶಿಯಾ ಧರ್ಮ ಗುರು ನಿಮರ್ ಅಲ್-ನಿಮರ್‌ರನ್ನು ಜನವರಿಯಲ್ಲಿ ಸೌದಿ ಅರೇಬಿಯದಲ್ಲಿ ಗಲ್ಲಿಗೇರಿಸಿದ ಬಳಿಕ ಎರಡು ದೆಶಗಳ ನಡುವೆ ಉದ್ವಿಗ್ನತೆ ನೆಲೆಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News