ಭಾರತದ ಮಹಿಳಾ ಪುಟ್ಬಾಲ್ ತಂಡದಲ್ಲಿ ಲೈಂಗಿಕ ಶೋಷಣೆ: ಸೋನಾ ಚೌಧರಿ ಆರೋಪ
ಹೊಸದಿಲ್ಲಿ, ಮಾ.12: ಭಾರತದ ಮಾಜಿ ಮಹಿಳಾ ಫುಟ್ಬಾಲ್ ಆಟಗಾರ್ತಿ ಸೋನಾ ಚೌಧರಿ ‘ ಗೇಮ್ ಇನ್ ಗೇಮ್’ ಹೆಸರಿನ ತನ್ನ ಆತ್ಮಚರಿತ್ರೆಯ ಪುಸ್ತಕದಲ್ಲಿ ಭಾರತದ ಮಹಿಳಾ ಫುಟ್ಬಾಲ್‌ನಲ್ಲಿ ಲೈಂಗಿಕ ಶೋಷಣೆ ವಿಪರೀತವಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ವಾರಣಸಿಯಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿರುವ ಸೋನಾ ತಾನು ದೇಶದ ಪರ ಫುಟ್ಬಾಲ್ ಆಡುತ್ತಿದ್ದಾಗ ಎದುರಿಸಿದ್ದ ತಲೆ ತಗ್ಗಿಸುವ ಘಟನೆಯನ್ನು ವಿವರಿಸಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರ ಮಟ್ಟ ಸೇರಿದಂತೆ ಎಲ್ಲ ಕಡೆಯಲ್ಲೂ ಲೈಂಗಿಕ ಶೋಷಣೆ ಇದ್ದವು. ಆಟಗಾರರು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರು. ಕೆಲವೊಮ್ಮೆ ರಾಜಿ ಮಾಡಿಕೊಳ್ಳಬೇಕಾಗುತ್ತಿತ್ತು. ವಿದೇಶ ಪ್ರವಾಸ ಕೈಗೊಂಡಾಗ ಕೋಚ್ ಹಾಗೂ ಸಿಬ್ಬಂದಿ ವರ್ಗಗಳ ಮಲಗುವ ಹಾಸಿಗೆಗಳು ಆಟಗಾರ್ತಿಯರ ಕೊಠಡಿಯಲ್ಲಿ ಇಡಲಾಗುತ್ತಿತ್ತು. ಎಷ್ಟೇ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಲೈಂಗಿಕ ಕಿರುಕುಳದಿಂದ ಪಾರಾಗಲು ನಾವು ಸಲಿಂಗಕಾಮಿಗಳಂತೆ ನಟಿಸುತ್ತಿದ್ದೆವು ಎಂದು ಸೋನಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.