4ವರ್ಷಗಳಿಂದ ಕುವೈಟ್‌ನಲ್ಲಿ ಬಾಕಿಯಾಗಿರುವ ಕೇರಳದ ಮಹಿಳೆ!
ಕೋಟ್ಟಯಂ, ಮೇ 13: ಮನೆಕೆಲಸಕ್ಕಾಗಿ ಕುವೈಟ್‌ಗೆ ಹೋದ ಕೇರಳದ ಮಹಿಳೆಯೊಬ್ಬರು ನಾಲ್ಕುವರ್ಷಗಳಿಂದ ಸರಿಯಾದ ಊಟ ಸೌಲಭ್ಯಗಳಿಲ್ಲದೆ ಊರಿಗೂ ಬರಲಾಗದೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ದೂರಲಾಗಿದೆ. ಕೋಟ್ಟಯಂ ವಕತ್ತಾನಂ ಎಂಬಲ್ಲಿನ ಮಹಿಳೆ ಸನಿತಾ ಶಾಜಿ(34) ಪತಿ ಅವರನ್ನು ತೊರೆದ ಮೇಲೆ 2012 ಮೇಯಲ್ಲಿ ಮನೆಕೆಲಸಕ್ಕೆಂದು ಕುವೈಟ್‌ಗೆ ಹೋಗಿದ್ದರು. ಈಗ ಅವರಿಗೆ ಕಠಿಣ ಕೆಲಸ ಜೊತೆಗೆ ಸರಿಯಾದ ಆಹಾರವನ್ನು ನೀಡುತ್ತಿಲ್ಲ. ಮಾತ್ರವಲ್ಲ ಅಗ್ರಿಮೆಂಟ್‌ನಲ್ಲಿ ಹೇಳಿದಷ್ಟು ಸಂಬಳವನ್ನೂ ಕೊಡುವುದಿಲ್ಲ. ಇತರ ಸೌಲಭ್ಯಗಳೂ ಇಲ್ಲ. ಎರಡು ವರ್ಷ ಕಾಲಾವಧಿ ಮುಗಿದಿದ್ದರೂ ಅಗ್ರಿಮೆಂಟ್ ನವೀಕರಣಕ್ಕೆ ಸ್ಪೋನ್ಸರ್ ಸಿದ್ಧವಾಗಿಲ್ಲ. 2014 ಜುಲೈ 13ಕ್ಕೆ ಭಾರತದ ರಾಯಭಾರಿ ಕಚೇರಿಯಲ್ಲಿ ಆಶ್ರಯ ಪಡೆದಿದ್ದರು. ದಾಖಲೆಗಳನ್ನು ಸರಿಪಡಿಸಿ ಮಹಿಳೆಯನ್ನು ಊರಿಗೆ ಕಳುಹಿಸುವ ಬದಲು ರಾಯಭಾರಿ ಕಚೇರಿಯವರು ಯಾವುದೋ ನಿರಾಶ್ರಿತ ಕೇಂದ್ರದಲ್ಲಿರಿಸಿದ್ದಾರೆ. ಒಂದು ತಿಂಗಳ ನಂತರ ಮನೆಯಿಂದ ಚಿನ್ನಾಭರಣಗಳನ್ನು ಕದ್ದಿದ್ದಾರೆ ಎಂದು ಸ್ಪೋನ್ಸರ್ ದೂರಿತ್ತದ್ದರಿಂದ ಮಹಿಳೆಯನ್ನು ಊರಿಗೆ ಕಳುಹಿಸುವ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ ಎಂದು ವರದಿಯಾಗಿದೆ.
ಸಂಬಂಧಿಕರ ನೆರವಲ್ಲಿ ರಾಯಭಾರಿ ಕಚೇರಿಯ ಆಶ್ರಯ ಕೇಂದ್ರದಿಂದ ಮಹಿಳೆ ಹೊರ ಬಂದರೂ ಪ್ರಯಾಣ ದಾಖಲೆಗಳ ಸಮಯಾವಧಿ ಮೀರಿದ್ದರಿಂದ ತಂದೆ ತೀರಿಕೊಂಡರೂ ಊರಿಗೆ ಬರಲು ಸಾಧ್ಯವಾಗಿಲ್ಲ. ಸ್ಫೋನ್ಸರ್‌ನೊಂದಿಗೆ ಮಾತಾಡಿ ಪ್ರಕರಣವನ್ನು ರಾಜಿಯಲ್ಲಿ ಮುಗಿಸುವುದಕ್ಕಾಗಲಿ ಕಾನೂನು ಕ್ರಮಕೈಗೊಳ್ಳಲಿಕ್ಕಾಗಲಿ ರಾಯಭಾರಿ ಕಚೇರಿ ಸಿದ್ಧವಾಗಿಲ್ಲ ಎಂದು ಆರೋಪಿಸಲಾಗಿದೆ. ಎರಡು ಬಾರಿ ಕುವೈಟ್‌ಗೆ ಬಂದ ಸಚಿವ ಕೆಸಿ ಜೋಸೆಫ್‌ರಿಗೆ ದೂರು ನೀಡಿಯೂ ಪ್ರಯೋಜನವಾಗಿಲ್ಲ. ವಿದೇಶ ಸಚಿವೆ ಸುಶ್ಮಾ ಸ್ವರಾಜ್‌ರಿಗೆ ದೂರು ನೀಡಲಾಗಿದೆ. ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮನೆಗೆ ಹೋಗಿ ದೂರು ನೀಡಲಾಗಿದೆ. ಆದರೂ ಮಹಿಳೆಯನ್ನು ಊರಿಗೆ ಕರೆತರಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.