×
Ad

ಎಮ್ಮೆ ಕದ್ದ ಶಂಕೆಯಲ್ಲಿ ವಿದ್ಯಾರ್ಥಿ ಹತ್ಯೆ: ತೃಣಮೂಲ ಕಾಂಗ್ರೆಸ್ ನಾಯಕ ಸೆರೆ

Update: 2016-05-13 20:33 IST

ಕೋಲ್ಕತಾ,ಮೇ 13: ಮಂಗಳವಾರ ಇಲ್ಲಿಗೆ ಸಮೀಪದ ಡೈಮಂಡ್ ಹಾರ್ಬರ್‌ನಲ್ಲಿ ಎಮ್ಮೆಯನ್ನು ಕದ್ದಿದ್ದಾನೆಂಬ ಶಂಕೆಯಲ್ಲಿ 23ರ ಹರೆಯದ ವಿದ್ಯಾರ್ಥಿ ಕೌಶಿಕ್ ಪುರಕಾಯಸ್ಥ ಎಂಬಾತನನ್ನು ಥಳಿಸಿ ಕೊಂದಿದ್ದ ಗ್ರಾಮಸ್ಥರ ಗುಂಪಿನ ನೇತೃತ್ವ ವಹಿಸಿದ್ದ ತೃಣಮೂಲ ಕಾಂಗ್ರೆಸ್ ನಾಯಕ ತಪಸ್ ಮಲ್ಲಿಕ್‌ನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಐಟಿಐ ವಿದ್ಯಾರ್ಥಿಯಾಗಿದ್ದ ಕೌಶಿಕ್ ಡೈಮಂಡ್ ಹಾರ್ಬರ್‌ನ ಹರಿಂದಂಗಾ ಗ್ರಾಮಕ್ಕೆ ತನ್ನ ಸಂಬಂಧಿಗಳನ್ನು ಭೇಟಿಯಾಗಲು ತೆರಳಿದ್ದ. ಆದರೆ ಗ್ರಾಮದಲ್ಲಿಯ ಎಮ್ಮೆಯೊಂದು ನಾಪತ್ತೆಯಾಗಿದ್ದರಿಂದ ಆಕ್ರೋಶಗೊಂಡಿದ್ದ ಜನರು ಅಪರಿಚಿತ ಕೌಶಿಕ್‌ನನ್ನು ಹಿಡಿದು ಆತನೇ ಎಮ್ಮೆ ಕದ್ದಿದ್ದಾನೆಂದು ಆರೋಪಿಸಿದ್ದರು.
ವಿಷಯ ತಿಳಿದು ಕೌಶಿಕ್‌ನ ತಾಯಿ ಮತ್ತು ಚಿಕ್ಕಮ್ಮ ಸ್ಥಳಕ್ಕೆ ಧಾವಿಸಿದ್ದರು. ಕೌಶಿಕ್ ಹೊಡೆತದಿಂದ ತೀವ್ರವಾಗಿ ಗಾಯಗೊಂಡಿದ್ದರೂ ಗ್ರಾಮಸ್ಥರು ಆತನನ್ನು ಬಿಡಲು ಸಿದ್ಧರಿರಲಿಲ್ಲ. ಕೊನೆಗೆ ಎಮ್ಮೆಯ ವೌಲ್ಯವಾದ 60,000 ರೂ.ಗಳನ್ನು ಪಾವತಿಸುವುದಾಗಿ ಅವರಿಂದ ಭರವಸೆ ಪಡೆದ ಬಳಿಕವೇ ಬಿಡುಗಡೆಗೊಳಿಸಿದ್ದರು.
ಕೋಲ್ಕತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಕೌಶಿಕ್ ಶುಕ್ರವಾರ ಬೆಳಿಗ್ಗೆ ಕೊನೆಯುಸಿರೆದಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧಿತ ಮಲ್ಲಿಕ್ ಸೇರಿದಂತೆ ಹತ್ತು ಜನರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News