ನೌಕಾಪಡೆಯ ಅಧಿಕಾರಿಗಳಿಂದ ಪತ್ನಿ ಬದಲಾವಣೆ?
ಹೊಸದಿಲ್ಲಿ, ಮೇ 13: ನೌಕಾಪಡೆಯ ಅಧಿಕಾರಿಗಳು ಪತ್ನಿಯರನ್ನು ಬದಲಾಯಿಸಿಕೊಳ್ಳುವ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕೇರಳ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಐಎನ್‌ಎಸ್ ಕೊಚ್ಚಿಯಲ್ಲಿ ಕೆಲಸ ಮಾಡುವ ನೌಕಾಪಡೆಯ ಅಧಿಕಾರಿಗಳು ಪತ್ನಿಯಂದಿರ ಬದಲಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಅದಕ್ಕೆ ಒಪ್ಪದ ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ನೌಕಾಪಡೆ ಅಧಿಕಾರಿಯೊಬ್ಬರ ಪರಿತ್ಯಕ್ತ ಪತ್ನಿ ಆರೋಪಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಪ್ರಕರಣದ ತನಿಖೆಯನ್ನು ಮೂರು ತಿಂಗಳೊಳಗೆ ಮುಗಿಸುವಂತೆಯೂ ಸುಪ್ರೀಂ ಕೋರ್ಟ್ ಕೇರಳ ಸರಕಾರಕ್ಕೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮತ್ತು ಆರ್.ಬಾಲಸುಬ್ರಹ್ಮಣ್ಯಂ ಮತ್ತು ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ದೂರುದಾರರ ಕೋರಿಕೆಯನ್ನು ವಜಾಗೊಳಿಸಿತು. ಆದರೆ ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಸೂಚಿಸಿತು.