ಮಾಲೆಗಾಂವ್ ಸ್ಫೋಟ ಪ್ರಕರಣ: ಎನ್‌ಐಎ ಆರೋಪಪಟ್ಟಿಯಲ್ಲಿ ಪ್ರಜ್ಞಾಸಿಂಗ್ ಹೆಸರಿಲ್ಲ!

Update: 2016-05-13 18:08 GMT

ಆರೋಪಪಟ್ಟಿಯಿಂದ ಐವರು ಹೊರಗೆ

ಮುಂಬೈ, ಮೇ 13: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ದ್ವಿತೀಯ ಆರೋಪಪಟ್ಟಿಯನ್ನು ಶುಕ್ರವಾರ ನ್ಯಾಯಾಲಯದಲ್ಲಿ ಸಲ್ಲಿಸಿದೆ. ಸಾಕ್ಷಾಧಾರಗಳ ಕೊರತೆಯಿಂದಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ ಮೂವರ ವಿರುದ್ಧದ ಆರೋಪಗಳನ್ನು ಅದು ಕೈಬಿಟ್ಟಿದೆ. ಈ ಬಗ್ಗೆ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆಯಾದರೂ, ಪ್ರಕರಣದಲ್ಲಿ ಲೆಕ ಶ್ರೀಕಾಂತ ಪುರೋಹಿತ್ ಮತ್ತು ಇತರ ಹಲವರ ವಿರುದ್ಧ ಕಠೋರ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ(ಮೋಕಾ)ಯಡಿಯ ಆರೋಪಗಳನ್ನೂ ಕೈಬಿಡಲಾಗಿದ್ದು, ಅಕ್ರಮ ಚಟುವಟಿಕೆಗಳ(ತಡೆ) ಕಾಯ್ದೆಯಡಿ ಆರೋಪಗಳು ಮುಂದುವರಿಯಲಿವೆ ಎನ್ನಲಾಗಿದೆ.

‘ಕೇಸರಿ ಭಯೋತ್ಪಾದನೆ’ಯ ಮುಖಗಳೆಂದು ಬಣ್ಣಿಸಲ್ಪಟ್ಟ ಸಾಧ್ವಿ ಮತ್ತು ಪುರೋಹಿತ್ ಕಳೆದ ಸುಮಾರು ಏಳು ವರ್ಷಗಳಿಂದ ಜೈಲಿನಲ್ಲಿದ್ದಾರೆ.
ಪ್ರಕರಣದ ತನಿಖೆಯನ್ನು ಮೊದಲು ಹೇಮಂತ್ ಕರ್ಕರೆ ನೇತೃತ್ವದ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ವು ನಡೆಸಿತ್ತು. ಕರ್ಕರೆ ಮತ್ತು ಅವರ ತಂಡ 2008, ನ.26ರಂದು ಮುಂಬೈ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಭಯೋತ್ಪಾದಕರಿಂದ ನಿಗೂಢವಾಗಿ ಹತರಾಗಿದ್ದರು.

ಇಂದು ಸಲ್ಲಿಸಿರುವ ತನ್ನ ಆರೋಪಪಟ್ಟಿಯಲ್ಲಿ ಎನ್‌ಐಎ ಎಟಿಎಸ್‌ನ ತನಿಖೆಯನ್ನು ಟೀಕಿಸಿರುವ ನಿರೀಕ್ಷೆಯಿದೆ. ಪುರೋಹಿತ ಮತ್ತು ಸಾಧ್ವಿ ಪ್ರಜ್ಞಾ 2007ರ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದನನ್ನು ಭೇಟಿಯಾಗಿದ್ದರು ಮತ್ತು ಮಾಲೆಗಾಂವ್ ಸ್ಫೋಟದ ಸಂಚು ರೂಪಿಸಿದ್ದರು ಎಂದು ಎಟಿಎಸ್ ಆರೋಪಿಸಿತ್ತು.

ಪ್ರಕರಣದಲ್ಲಿ ಹಲವಾರು ಸಾಕ್ಷಿಗಳು ಬಳಿಕ ಪ್ರತಿಕೂಲ ಸಾಕ್ಷ ನುಡಿದಿದ್ದರು. ಸಾಧ್ವಿ ವಿರುದ್ಧ ಸ್ಫೋಟ ಆರೋಪವನ್ನು ಹೊರಿಸಲು ಸಾಕಷ್ಟು ಸಾಕ್ಷಾಧಾರಗಳಿಲ್ಲ ಎಂದು ಎನ್‌ಐಎ ಹೇಳಿದೆಯೆನ್ನಲಾಗಿದೆ.

ಎನ್‌ಐಎ ಮತ್ತು ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿರುವ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು, ಹೇಮಂತ್ ಕರ್ಕರೆ ತಪ್ಪು ವರದಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನೀವು ಆರೋಪಿಗಳನ್ನು ರಕ್ಷಿಸಲು ಬಯಸಿದ್ದೀರಿ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ಜೊತೆ ನೀವು ನಂಟು ಹೊಂದಿದ್ದೀರಿ ಎನ್ನುವುದು ನಮಗೆ ಗೊತ್ತು ಎನ್ನುವುದನ್ನು ಕೇಂದ್ರದ ಗಮನಕ್ಕೆ ತರಲು ನಾವು ಬಯಸಿದ್ದೇವೆ. ಕನಿಷ್ಠ ಕರ್ಕರೆಯಂತಹ ಹುತಾತ್ಮರನ್ನಾದರೂ ಅವರು ಬಿಡಬೇಕು ಎಂದು ಹೇಳಿದರು.

ಕರ್ಕರೆ ತನಿಖೆಯಲ್ಲಿ ಲೋಪ ಎಂದ ಎನ್‌ಐಎ!

2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ನಡೆಸಿದ್ದ ತನಿಖೆಯಲ್ಲಿ ಲೋಪವಿದೆಯೆಂದು ಚಾರ್ಜ್‌ಶೀಟ್‌ನಲ್ಲಿ ಎನ್‌ಐಎ ಹೇಳಿದೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಮೊದಲು ಹೇಮಂತ ಕರ್ಕರೆ ನೇತೃತ್ವದ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ವು ನಡೆಸಿತ್ತು. ಕರ್ಕರೆ ನ.26ರಂದು ಮುಂಬೈ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಭಯೋತ್ಪಾದಕರಿಂದ ನಿಗೂಢವಾಗಿ ಹತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News