ಜಾರ್ಖಂಡ್, ಬಿಹಾರ: 24 ತಾಸುಗಳಲ್ಲಿ ಇಬ್ಬರು ಪತ್ರಕರ್ತರ ಹತ್ಯೆ
ಸಿವಾನ್, ಮೇ 13: ಬಿಹಾರ ಹಾಗೂ ನೆರೆಯ ರಾಜ್ಯವಾದ ಜಾರ್ಖಂಡ್‌ನಲ್ಲಿ 24 ತಾಸುಗಳಲ್ಲಿ ಇಬ್ಬರು ಪತ್ರಕರ್ತರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.ಹಿಂದಿ ದೈನಿಕ ‘ಹಿಂದೂಸ್ತಾನ್’ನ ಸಿವಾನ್ ವಿಭಾಗದ ಬ್ಯೂರೋ ಮುಖ್ಯಸ್ಥರಾಗಿದ್ದ ಹಿರಿಯ ಪತ್ರಕರ್ತ ರಾಜ್‌ದೇವ್ ರಂಜನ್ ಶುಕ್ರವಾರ ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. 42 ವರ್ಷ ವಯಸ್ಸಿನ ರಂಜನ್, ಸಿವಾನ್ ರೈಲು ನಿಲ್ದಾಣದ ಸಮೀಪದ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಬರುತ್ತಿದ್ದಾಗ, ಅಲ್ಲಿ ಕಾದು ನಿಂತಿದ್ದ ದುಷ್ಕರ್ಮಿಗಳು ಅತಿ ಸನಿಹದಿಂದ ಅವರೆಡೆಗೆ ಎರಡು ಬಾರಿ ಗುಂಡುಹಾರಿಸಿದರು. ತಲೆ ಹಾಗೂ ಕುತ್ತಿಗೆಗೆ ಗಂಭೀರ ಗಾಯಗಳಾಗಿದ್ದ ರಂಜನ್ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ನೆರೆಯ ರಾಜ್ಯವಾದ ಜಾರ್ಖಂಡ್‌ನ ಛಾತ್ರಾ ಜಿಲ್ಲೆಯಲ್ಲಿ ಗುರುವಾರ ಸ್ಥಳೀಯ ಸುದ್ದಿ ಚಾನೆಲ್ ಒಂದರ ವರದಿಗಾರ 35 ವರ್ಷ ವಯಸ್ಸಿನ ಅಖಿಲೇಶ್ ಪ್ರತಾಪ್ ಸಿಂಗರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಅಖಿಲೇಶ್ ಪ್ರತಾಪ್ ವಾಸವಾಗಿರುವ ಗ್ರಾಮದ ಪಂಚಾಯತ್ ಕಚೇರಿಯ ಸಮೀಪವೇ ಅವರ ಹತ್ಯೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.