ಹೈದರಾಬಾದ್‌ಗೆ ಬಂದಿಳಿದ ವಿಶ್ವದ ಅತಿ ದೊಡ್ಡ ಕಾರ್ಗೋ ವಿಮಾನ
ಮುಂಬೈ, ಮೇ 13: ವಿಶ್ವದ ಅತಿ ದೊಡ್ಡ ಕಾರ್ಗೋ ವಿಮಾನ ಆಂಟೊನೊವ್ ಎಎನ್-225 ಮ್ರಿಯಾ ಅಥವಾ ದಿ ಡ್ರೀಮ್ ಭಾರತದಲ್ಲಿ ಪ್ರಥಮ ಬಾರಿಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.
ಸಾಮಾನ್ಯ ವಿಮಾನಗಳಿಗಿಂತ ಅಗಲವಾಗಿರುವ ಈ ವಿಮಾನವು ಆರು ಟರ್ಬೊ ಫ್ಯಾನ್ ಇಂಜಿನ್‌ಗಳನ್ನು ಹೊಂದಿದ್ದು ವಿಶ್ವದ ಅತಿ ಉದ್ದ ಹಾಗೂ ಭಾರವಾದ ವಿಮಾನವಾಗಿದೆಯಲ್ಲದೆ ಗರಿಷ್ಠ 650 ಟನ್ ಸರಕನ್ನು ಹೊರುವ ಸಾಮರ್ಥ್ಯ ಈ ಉಕ್ರೇನ್ ನಿರ್ಮಿತ ವಿಮಾನ ಹೊಂದಿದೆ. ಈ ವಿಮಾನದ ರೆಕ್ಕೆಗಳು ಕೂಡ ಇತರೆಲ್ಲಾ ವಿಮಾನಗಳಿಗಿಂತ ಅತಿ ದೊಡ್ಡದಾಗಿದೆ.
ತುರ್ಕಿಮೆನಿಸ್ತಾನದಿಂದ ಹೈದರಾಬಾದ್‌ಗೆ ಬಂದಿಳಿದ ಈ ವಿಮಾನವನ್ನು ವಿಶೇಷವಾಗಿ 180 ಟನ್‌ನಿಂದ 23 ಟನ್‌ಗಳವರೆಗೆ ಭಾರವಿರುವ ಸರಕುಗಳ ಅಂತರ್ ದೇಶೀಯ ಸಾಗಾಟಕ್ಕಾಗಿಯೆಂದೇ ನಿರ್ಮಿಸಲಾಗಿದೆ.
ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್ ಯುಕ್ರೇನಿನ ಆಂಟೊನಿಕ್ ಕಂಪೆನಿಯೊಂದಿಗೆ ಕಳೆದ ತಿಂಗಳು ಸಹಿ ಹಾಕಿದ ಮಹತ್ವದ ಒಪ್ಪಂದದ ನಂತರ ಈ ವಿಮಾನ ಭಾರತಕ್ಕೆ ಬಂದಿದೆ. ಎಚ್‌ಎಎಲ್‌ನ 10-80 ಸೀಟಿನ ವಿಮಾನ ನಿರ್ಮಾಣ ಯೋಜನೆ ಸಹಿತ ವಿವಿಧ ಯೋಜನೆಗಳಿಗೆ ರಿಲಯನ್ಸ್ ಡಿಫೆನ್ಸ್ ಹಾಗೂ ಆಂಟೊನಿಕ್ ಕಂಪೆನಿ ಜಂಟಿ ಸಹಕಾರ ನೀಡಲಿವೆ.
ಭಾರತಕ್ಕೆ ರೂ. 35,000 ಕೋಟಿ ಬೆಲೆಬಾಳುವ 200ಕ್ಕೂ ಹೆಚ್ಚು ಮಧ್ಯಮ ಗಾತ್ರದ ಟರ್ಬೊಫ್ಯಾನ್ ವಿಮಾನಗಳು ದೇಶದ ವಾಯುಪಡೆ, ಸೇನಾ ಪಡೆ ಹಾಗೂ ಪ್ಯಾರಾ ಮಿಲಿಟರಿ ಪಡೆಗಳ ನೆರವಿಗೆ ಬೇಕಾಗಿದೆ.