×
Ad

ಮಾನನಷ್ಟ ಕಾನೂನನ್ನು ಎತ್ತಿಹಿಡಿದ ಸುಪ್ರೀಂ

Update: 2016-05-13 23:58 IST

ಹೊಸದಿಲ್ಲಿ, ಮೇ 13: ಮಾನನಷ್ಟ ಕಾನೂನಿನಲ್ಲಿ ದಂಡ ಹೇರಿಕೆಗೆ ಸಂಬಂಧಿಸಿದ ನಿಯಮಾವಳಿಗಳ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ವಾಕ್‌ಸ್ವಾತಂತ್ರವನ್ನು ''ಪರಿಪೂರ್ಣವಾದ ಹಕ್ಕು'' ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ಅದು ಸ್ಪಷ್ಟಪಡಿಸಿದೆ. ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮತ್ತಿತರರು ಪ್ರತ್ಯೇಕವಾಗಿ ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನ್ಯಾಯಪೀಠವು ಈ  ತೀರ್ಪನ್ನು ನೀಡಿದೆ.
 ಮಾನನಷ್ಟ ಕಾನೂನಿಗೆ ಸಂಬಂಧಿಸಿ ದಂಡ ವಿಧಿಸುವಿಕೆಯ ಕುರಿತಾದ ನಿಯಮಗಳು ಸಾಂವಿಧಾನಿಕ ಸಿಂಧುತ್ವವನ್ನು ಹೊಂದಿವೆಯೆಂದು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಪ್ರಫುಲ್ಲಾ ಸಿ.ಪಂತ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ. ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಸಮನ್ಸ್‌ಗಳನ್ನು ಜಾರಿಗೊಳಿಸುವಾಗ ಅತ್ಯಂತ ಜಾಗರೂಕತೆ ವಹಿಸುವಂತೆಯೂ ನ್ಯಾಯಪೀಠವು ದೇಶಾದ್ಯಂತದ ಮ್ಯಾಜಿಸ್ಟ್ರೇಟ್‌ಗಳಿಗೆ ಸೂಚನೆ ನೀಡಿತು.
   ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಪಟ್ಟ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 499 ಹಾಗೂ 500 ಸೆಕ್ಷನ್ ಹಾಗೂ ಕ್ರಿಮಿನಲ್ ಕಾರ್ಯವಿಧಾನ ಸಂಹಿತೆಯ 199ನೆ ಸೆಕ್ಷನ್ ಸಾಂವಿಧಾನಿಕವಾಗಿ ಸಿಂಧುತ್ವವನ್ನು ಹೊಂದಿವೆಯೆಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಭಾರತೀಯ ದಂಡಸಂಹಿತೆಯ 500ನೆ ಸೆಕ್ಷನ್ ಪ್ರಕಾರ ಮಾನನಷ್ಟ ಮೊಕದ್ದಮೆಯಲ್ಲಿ ಆರೋಪಿಯು ತಪ್ಪಿತಸ್ಥನೆಂದು ಕಂಡುಬಂದಲ್ಲಿ, ಆತನಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಇವೆರಡನ್ನೂ ವಿಧಿಸಬಹುದಾಗಿದೆ.
   ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕ್ರಿಮಿನಲ್ ವಿಚಾರಣಾ ಕಲಾಪಗಳಿಗೆ ನೀಡಿರುವ ತಡೆಯಾಜ್ಞೆಯು 8 ವಾರಗಳವರೆಗೂ ಮುಂದುವರಿಯಲಿದೆಯೆಂದು ನ್ಯಾಯಪೀಠ ತಿಳಿಸಿದೆ. ಈ ಅವಧಿಯಲ್ಲಿ ಅರ್ಜಿದಾರರು, ಇಂದಿನ ತೀರ್ಪಿಗೆ ಸಂಬಂಧಿಸಿ  ಸಂಬಂಧಪಟ್ಟ ಹೈಕೋರ್ಟ್‌ಗಳಲ್ಲಿ ಮೇಲ್ಮನವಿ ಸಲ್ಲಿಸಬಹುದೆಂದು ಅದು ತಿಳಿಸಿದೆ. ನ್ಯಾಯಾಲಯದ ತೀರ್ಪು ಘೋಷಣೆಯ ಬಳಿಕ, ರಾಹುಲ್ ಪರ ನ್ಯಾಯವಾದಿ ಕಪಿಲ್ ಸಿಬಲ್ ಸುದ್ದಿಗಾರರ ಜೊತೆ ಮಾತನಾಡುತ್ತಾ, ಜುಲೈ 19ರಂದು ರಾಹುಲ್ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News