ಮುಗಿದ ತಾತ್ಕಾಲಿಕ ಮತಾಫ್ ಬ್ರಿಜ್ ತೆಗೆಯುವ ಕಾರ್ಯಾಚರಣೆ
ಮಕ್ಕಾ, ಮೇ 14: ಮಕ್ಕಾದ ಮಸ್ಜಿದುಲ್ ಹರಂನಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಮತಾಫನ್ನು ಶುಕ್ರವಾರ ಸಂಪೂರ್ಣವಾಗಿ ಕೆಡವಲಾಗಿದೆ. ಹಾಗಾಗಿ, ಕಾಬಾದ ಸಮೀಪ ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಭಾರೀ ಸ್ಥಳಾವಕಾಶ ಲಭ್ಯವಾಗಿದೆ.
‘‘ಒಟ್ಟು 10,489 ಮತಾಫ್ ತುಂಡುಗಳು ಹಾಗೂ ಅವುಗಳನ್ನು ಸಂಪರ್ಕಿಸುವ ಸೇತುವೆಗಳನ್ನು 35 ದಿನಗಳ ಅವಧಿಯಲ್ಲಿ ತೆರವುಗೊಳಿಸಲಾಗಿದೆ’’ ಎಂದು ಎರಡು ಪವಿತ್ರ ಮಸೀದಿಗಳ ಯೋಜನೆಗಳ ತಾಂತ್ರಿಕ ಸಮಿತಿ ಸದಸ್ಯ ವಯೀಲ್ ಅಲ್-ಹಲಾಬಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
580 ಸಾರ್ವಜನಿಕರು ಮತ್ತು ತಾಂತ್ರಿಕ ಸಮಿತಿಯ 80 ಎಂಜಿನಿಯರ್‌ಗಳು ಮತಾಫ್ ತೆರವುಗೊಳಿಸುವ ಕಾರ್ಯದಲ್ಲಿ ಪಾಲ್ಗೊಂಡರು.
ತಾತ್ಕಾಲಿಕ ಮತಾಫನ್ನು ಕ್ಷಿಪ್ರವಾಗಿ ತೆರವುಗೊಳಿಸುವ ನಿಟ್ಟಿನಲ್ಲಿ ಸಮಿತಿಯ ಉದ್ಯೋಗಿಗಳು ನಿರ್ವಹಿಸಿದ ಕಾರ್ಯವನ್ನು ಹಲಾಬಿ ಶ್ಲಾಘಿಸಿದರು.
ಭಕ್ತರ ಪ್ರಾರ್ಥನೆಗೆ ತೊಂದರೆಯಾಗದಂತೆ ಹಾಗೂ ಹೆಚ್ಚಿನ ಸ್ಥಳಾವಕಾಶ ಒದಗಿಸಿಕೊಡುವುದಕ್ಕಾಗಿ ಶುಕ್ರವಾರಗಳಂದು ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು ಎಂದರು. ಮತಾಫ್ ತೆರವುಗೊಳಿಸಲು 2 ಲಕ್ಷಕ್ಕೂ ಅಧಿಕ ಮಾನವ ಗಂಟೆಗಳ ಬಳಕೆಯಾಯಿತು ಎಂದು ಅವರು ನುಡಿದರು.
‘‘ದೇವರ ದಯೆಯಿಂದ ಈ ಕಾರ್ಯದಲ್ಲಿ ಯಾರಿಗೂ ಗಾಯ ಅಥವಾ ಇತರ ಯಾವುದೇ ತೊಂದರೆ ಉಂಟಾಗಲಿಲ್ಲ’’ ಎಂದು ಹಲಾಬಿ ಹೇಳಿದರು.