ಎನ್‌ಎಸ್‌ಜಿ ಸೇರ್ಪಡೆಗೆ ಭಾರತ ಸಿದ್ಧ: ಅಮೆರಿಕ ಚೀನಾ, ಪಾಕಿಸ್ತಾನಗಳಿಂದ ಪ್ರಬಲ ವಿರೋಧ
ವಾಶಿಂಗ್ಟನ್, ಮೇ 14: ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣದ ಅವಶ್ಯಕತೆಗಳನ್ನು ಭಾರತ ಪೂರೈಸಿರುವ ಹಿನ್ನೆಲೆಯಲ್ಲಿ, ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಸೇರ್ಪಡೆಗೊಳ್ಳಲು ಭಾರತ ಸಿದ್ಧವಾಗಿದೆ ಎಂದು ಅಮೆರಿಕ ಹೇಳಿದೆ.
‘‘2015ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷರು ಏನು ಹೇಳಿದ್ದರು ಎಂಬುದನ್ನು ನಾನೀನ ನೆನಪಿಸುತ್ತೇನೆ. ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣದ ಅವಶ್ಯಕತೆಗಳನ್ನು ಭಾರತ ಪೂರೈಸಿದೆ ಹಾಗೂ ಅದು ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಅರ್ಹವಾಗಿದೆ ಎಂದು ಅವರು ಹೇಳಿದ್ದರು’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಶುಕ್ರವಾರ ಹೇಳಿದರು.
ಭಾರತ ಪರಮಾಣು ಪೂರೈಕೆದಾರರ ಗುಂಪಿನ ಸದಸ್ಯನಾಗುವುದನ್ನು ವಿರೋಧಿಸಲು ಚೀನಾ ಮತ್ತು ಪಾಕಿಸ್ತಾನಗಳು ಕೈಜೋಡಿಸಿವೆ ಎಂಬ ವರದಿಗಳಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.
‘‘ಪರಮಾಣು ಪೂರೈಕೆ ಗುಂಪಿಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸುವ ವಿಷಯ ಅದರ ಹಾಲಿ ಸದಸ್ಯರ ಆಂತರಿಕ ವಿಷಯವಾಗಿದೆ ’’ ಎಂದರು.
ಭಾರತದ ಎನ್‌ಎಸ್‌ಜಿ ಪ್ರವೇಶಕ್ಕೆ ತಡೆಯೊಡ್ಡುವ ತನ್ನ ಪ್ರಯತ್ನಗಳನ್ನು ಇಂದು ಚೀನಾ ಸಮರ್ಥಿಸಿದೆ. ಪರಮಾಣು ಪ್ರಸರಣ ತಡೆ (ಎನ್‌ಪಿಟಿ) ಒಪ್ಪಂದಕ್ಕೆ ಸಹಿ ಹಾಕುವುದು ಯಾವುದಾದರೂ ದೇಶದ ಎನ್‌ಎಸ್‌ಜಿ ಸೇರ್ಪಡೆಗೆ ಇರುವ ಪ್ರಧಾನ ಶರತ್ತಾಗಿದೆ ಎಂಬುದಾಗಿ 48 ದೇಶಗಳ ಸಂಘಟನೆ ಎನ್‌ಎಸ್‌ಜಿಯ ಹಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಅದು ಹೇಳಿದೆ.
ಅಂತಾರಾಷ್ಟ್ರೀಯ ಪರಮಾಣು ಪ್ರಸರಣ ವಿರೋಧಿ ವ್ಯವಸ್ಥೆಯನ್ನು ಕಾಯ್ದುಕೊಂಡು ಬರುವಲ್ಲಿ ಎನ್‌ಪಿಟಿ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದಾಗಿ ಚೀನಾ ಮಾತ್ರವಲ್ಲ, ಹೆಚ್ಚಿನ ಎನ್‌ಎಸ್‌ಜಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ಚೀನಾದ ವಿದೇಶ ವ್ಯವಹಾರಗಳ ವಕ್ತಾರ ಲು ಕಂಗ್ ಬೀಜಿಂಗ್‌ನಲ್ಲಿ ಹೇಳಿದರು.