ಮೇ22 ಬಿಸಿಸಿಐ ನೂತನ ಅಧ್ಯಕ್ಷರ ಆಯ್ಕೆ
ಹೊಸದಿಲ್ಲಿ, ಮೇ 14: ಶಶಾಂಕ್ ಮನೋಹರ್ ರಾಜೀನಾಮೆಯಿಂದ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಿಸಿಸಿಐ ಮೇ 22(ರವಿವಾರ)ರಂದು ವಿಶೇಷ ವಾರ್ಷಿಕ ಮಹಾಸಭೆ(ಎಸ್‌ಜಿಎಂ) ಕರೆದಿದೆ.
ಹೌದು, ನಾವು ಮೇ 22 ರಂದು ಮುಂಬೈನಲ್ಲಿ ಎಸ್‌ಜಿಎಂ ನಡೆಸಲಿಸದ್ದು, ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಸಭೆಯ ಏಕೈಕ ಕಾರ್ಯಸೂಚಿಯಾಗಿದೆ ಎಂದು ಗೋವಾ ಕ್ರಿಕೆಟ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ವಿನೋದ್ ಫಾಡ್ಕೆ ಹೇಳಿದ್ದಾರೆ.
ಮನೋಹರ್ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಏಳು ತಿಂಗಳ ಬಳಿಕ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದಾರೆ. ಇತ್ತೀಚೆಗೆ ಅವರು ಐಸಿಸಿಯ ಸ್ವತಂತ್ರ ಮುಖ್ಯಸ್ಥರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಬಿಸಿಸಿಐನ ನೂತನ ಅಧ್ಯಕ್ಷ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಹಾಗೂ ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷ ಅಜಯ ಶಿರ್ಕೆ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ.