×
Ad

ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ರುವಾಂಡ ನಾಯಕ ಎರಿಕ್

Update: 2016-05-14 23:12 IST

ಸತತ 51 ಗಂಟೆಗಳ ಕಾಲ ಬ್ಯಾಟಿಂಗ್

 ಹೊಸದಿಲ್ಲಿ, ಮೇ 14: ಈ ತನಕ ಗುರುತರ ಸಾಧನೆ ಮಾಡದ ರುವಾಂಡ ಕ್ರಿಕೆಟ್ ತಂಡದ ನಾಯಕ ಎರಿಕ್ ಡುಸಿಂಗಿಝಿಮಾನ ನೆಟ್‌ನಲ್ಲಿ ಸತತ 51 ಗಂಟೆಗಳ ಕಾಲ ಬ್ಯಾಟಿಂಗ್ ಮಾಡುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ರುವಾಂಡದಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಮಹತ್ವದ ಉದ್ದೇಶವನ್ನಿಟ್ಟುಕೊಂಡು ಅತ್ಯಂತ ದೀರ್ಘ ಸಮಯ ನೆಟ್‌ನಲ್ಲಿ ಬ್ಯಾಟ್ ಮಾಡುವ ಸಾಹಸಕ್ಕೆ ಎರಿಕ್ ಮುಂದಾಗಿದ್ದರು. 51 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿರುವ ಎರಿಕ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತದ ವಿರಾಗ್ ಮಾರೆ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಮುರಿದು ಮುನ್ನುಗ್ಗಿದರು. ಮಾರೆ 50 ಗಂಟೆಗಳ ಕಾಲ ಬ್ಯಾಟಿಂಗ್ ನಡೆಸಿ ದಾಖಲೆ ನಿರ್ಮಿಸಿದ್ದರು.

ರುವಾಂಡ ಕ್ರಿಕೆಟ್ ಸ್ಟೇಡಿಯಂ ಫೌಂಡೇಶನ್‌ಗೆ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿರುವ ಎರಿಕ್ 15,000 ಡಾಲರ್ ಗುರಿ ಹಾಕಿಕೊಂಡಿದ್ದು ಈಗಾಗಲೇ 5,000 ಡಾಲರ್ ನಿಧಿ ಸಂಗ್ರಹಿಸಿದ್ದಾರೆ.

ಎರಿಕ್ ಮ್ಯಾರಥಾನ್ ಬ್ಯಾಟಿಂಗ್ ಪ್ರಯತ್ನ ಮೇ 11(ಬುಧವಾರ) ರಂದು ಆರಂಭವಾಗಿ ಮೇ 14(ಶುಕ್ರವಾರ) ಕೊನೆಗೊಂಡಿದೆ. ಆರೋಗ್ಯ ತಪಾಸಣೆ ಹಾಗೂ ಆಹಾರ ಸೇವನೆಗೆ ಪ್ರತಿ ಗಂಟೆಯಲ್ಲಿ ತಲಾ ಐದು ನಿಮಿಷ ವಿರಾಮ ನೀಡಲಾಗಿದೆ. ರುವಾಂಡದ ಬ್ರಿಟನ್ ಹೈಕಮಿಶನರ್ ವಿಲಿಯಂ ಗೆಲ್ಲಿಂಗ್ ಮೊದಲ ಎಸೆತವನ್ನು ಎಸೆದರೆ, ಎರಿಕ್ ಪತ್ನಿ ಕೊನೆಯ ಓವರ್ ಬೌಲಿಂಗ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News