ಡೆಲ್ಲಿಗೆ ಗೆಲುವಿನ ಓಟ ಮುಂದುವರಿಸುವ ವಿಶ್ವಾಸ
ವಿಶಾಖಪಟ್ಟಣ, ಮೇ 14: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಭಡ್ತಿ ಪಡೆದಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡ ರವಿವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧವೂ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.
ಡೆಲ್ಲಿ ತಂಡ ಲೀಗ್‌ನ ಮೊದಲಾರ್ಧದಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿತ್ತು. ಆದರೆ, ಇತ್ತೀಚೆಗೆ ಅಸ್ಥಿರ ಪ್ರದರ್ಶನ ನೀಡಿ ಸತತ ಸೋಲು ಕಂಡಿದ್ದ ಝಹೀರ್ ಖಾನ್ ನೇತೃತ್ವದ ಡೆಲ್ಲಿ ತಂಡ ಸನ್‌ರೈಸರ್ಸ್ ವಿರುದ್ಧ ಜಯ ಸಾಧಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ರವಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಒಂದು ವೇಳೆ ಡೆಲ್ಲಿ ತಂಡ ಗೆಲುವು ಸಾಧಿಸಿದರೆ 10 ಪಂದ್ಯಗಳಲ್ಲಿ 12 ಅಂಕ ಗಳಿಸಿ ಪ್ಲೇ-ಆಫ್‌ಗೆ ಒಂದು ಹೆಜ್ಜೆ ಇಡಲಿದೆ.
ಮುಂಬೈಗೆ ಮಾಡು-ಮಡಿ ಪಂದ್ಯ:
ಮುಂಬೈಗೆ ಈ ಪಂದ್ಯ ಮಾಡು-ಮಡಿ ಪಂದ್ಯವಾಗಿದ್ದು, ಸೋತರೆ ಪ್ಲೇ-ಆಫ್ ರೇಸ್‌ನಿಂದ ಹೊರ ಬೀಳಲಿದೆ. ಮುಂಬೈ 12 ಪಂದ್ಯಗಳಲ್ಲಿ 12 ಅಂಕ ಗಳಿಸಿದೆ. ಅಂಕಪಟ್ಟಿಯಲ್ಲಿ 5ನೆ ಸ್ಥಾನದಲ್ಲಿದೆ. ಇನ್ನು ಕೇವಲ 2 ಪಂದ್ಯ ಆಡಲು ಬಾಕಿಯಿದೆ.
ಡೆಲ್ಲಿ ತಂಡ ನಾಯಕ ಝಹೀರ್ ಖಾನ್ ಅನುಪಸ್ಥಿತಿಯಲ್ಲಿ ಸನ್‌ರೈಸರ್ಸ್ ವಿರುದ್ದ ಆಲ್‌ರೌಂಡ್ ಪ್ರದರ್ಶನ ನೀಡಿತ್ತು. ಲೀಗ್‌ನಲ್ಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಹಾಗೂ ವೇಗದ ಬೌಲರ್ ನಥನ್ ಕೌಲ್ಟರ್ ನೀಲ್ ತಲಾ ಎರಡು ವಿಕೆಟ್ ಪಡೆದು ಸನ್‌ರೈಸರ್ಸ್‌ನ್ನು 146 ರನ್‌ಗೆ ನಿಯಂತ್ರಿಸಿದ್ದರು.
ಝಹೀರ್ ದಕ್ಷ ನಾಯಕತ್ವ: ಝಹೀರ್ ಡೆಲ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು, ತಂಡದ ಆಟಗಾರರನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಬಾಂಬೆ ಹೈಕೋರ್ಟ್ ಬರ ಪೀಡಿತ ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯಗಳಿಗೆ ನಿಷೇಧ ಹೇರಿರುವ ಕಾರಣ ಮುಂಬೈಗೆ ವಿಶಾಖಪಟ್ಟಣ ತವರು ಮೈದಾನವಾಗಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಅಸ್ಥಿರ ಪ್ರದರ್ಶನ ನೀಡಿರುವ ಮುಂಬೈ ತಂಡ ಶುಕ್ರವಾರ ನಡೆದ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಪಂಜಾಬ್ ವಿರುದ್ಧ ಮೊಹಾಲಿಯಲ್ಲಿ 7 ವಿಕೆಟ್‌ಗಳ ಅಂತರದಿಂದ ಸೋತು ತೀವ್ರ ಹಿನ್ನಡೆ ಅನುಭವಿಸಿದೆ.
ಪಂದ್ಯದ ಸಮಯ: ಸಂಜೆ 4:00