×
Ad

ಮಹಿಳೆಯರೊಂದಿಗೆ ಟ್ರಂಪ್ ನಡವಳಿಕೆ ಪ್ರಶ್ನಾರ್ಹ : ನ್ಯೂಯಾರ್ಕ್ ಟೈಮ್ಸ್ ವರದಿ

Update: 2016-05-15 22:22 IST

  ವಾಶಿಂಗ್ಟನ್, ಮೇ 14: ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜೊತೆ ಕೆಲಸ ಮಾಡಿದ್ದ ಅಥವಾ ಸಾಮಾಜಿಕವಾಗಿ ಅವರೊಂದಿಗೆ ಒಡನಾಟವನ್ನು ಹೊಂದಿದ್ದ, ಹಲವಾರು ಮಹಿಳೆಯರು ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು, ಮಹಿಳೆಯರ ಬಗ್ಗೆ ಟ್ರಂಪ್ ನಡವಳಿಕೆಯು ಪ್ರಶ್ನಾರ್ಹವಾಗಿದೆಯೆಂಬುದನ್ನು ಬಯಲಿಗೆಳೆದಿದೆ.

      ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು 50ಕ್ಕೂ ಅಧಿಕ ಮಹಿಳೆಯರ ಜೊತೆ ನಡೆಸಿದ ಸಂದರ್ಶನಗನ್ನು ಆಧರಿಸಿ ಪ್ರಕಟಿಸಿದ ವರದಿಯೊಂದರಲ್ಲಿ, ಟ್ರಂಪ್ ಅವರು ಮಹಿಳೆಯರನ್ನು ಲೈಂಗಿಕ ವಸ್ತುಗಳೆಂಬಂತೆ ಕಾಣುತ್ತಿದ್ದರು ಹಾಗೂ ಅವರ ಅಂಗಸೌಷ್ಟವದ ಬಗ್ಗೆ ಅಸಭ್ಯವಾದ ಟೀಕೆಗಳನ್ನು ಮಾಡುತ್ತಿದ್ದರು ಎಂದು ಹೇಳಿದೆ. ಆದರೆ ಕೆಲವು ಮಹಿಳೆಯರು ಮಾತ್ರ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲು ಟ್ರಂಪ್ ಪ್ರೋತ್ಸಾಹ ನೀಡಿದ್ದರೆಂದು ಒಪ್ಪಿಕೊಂಡಿದ್ದಾರೆ ಮತ್ತು ಸಾಮಾನ್ಯವಾಗಿ ಮಹಿಳೆಯರನ್ನು ಹೊರಗಿಡಲಾಗುವ ಹುದ್ದೆಗಳಲ್ಲಿಯೂ ತಮ್ಮನ್ನು ಟ್ರಂಪ್ ನೇಮಿಸಿಕೊಂಡಿದ್ದರೆಂದು ಹೇಳಿದ್ದಾರೆ.

ಈ ಲೇಖನದಲ್ಲಿ ವಿವರಿಸಲಾಗಿರುವ ಕೆಲವು ವಿವಾದಾತ್ಮಕ ಘಟನೆಗಳ ಬಗ್ಗೆ ಟ್ರಂಪ್‌ರನ್ನು ಪ್ರಶ್ನಿಸಿದಾಗ, ಅವರು ಅದನ್ನು ನಿರಾಕರಿಸಿದ್ದಾರೆಂದು ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ‘‘ ನಾನು ಯಾವತ್ತೂ ಮಹಿಳೆಯರನ್ನು ಅಪಾರ ಗೌರವದಿಂದ ಕಂಡಿದ್ದಾಗಿ’’ ಟ್ರಂಪ್ ಸ್ಪಷ್ಟಪಡಿಸಿರುವುದಾಗಿ ಅದು ಹೇಳಿದೆ. ಲಾಸ್ ಏಂಜಲೀಸ್‌ನ ರಿಯಲ್ ಎಸ್ಟೇಟ್ ಯೋಜನೆಯ ನೇಮಕಾತಿಗಾಗಿ ನಡೆದ ಸಂದರ್ಶನವೊಂದರಲ್ಲಿ ಟ್ರಂಪ್, ತನ್ನ ಮುಂದೆಯೇ ಕ್ಯಾಲಿಫೋರ್ನಿಯಾದ ಮಹಿಳೆಯರ ಬಗ್ಗೆ ಅಶ್ಲೀಲವಾದ ಮಾತುಗಳನ್ನಾಡಿದ್ದರೆಂದು ಅವರ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ರೆಸ್ ಎಂಬಾಕೆ ನೆನಪಿಸಿಕೊಂಡಿದ್ದಾರೆ. ರೂಪದರ್ಶಿಯೊಬ್ಬಳ ಜೊತೆ ತಾನು ಡೇಟಿಂಗ್ ಮಾಡುತ್ತಿರುವುದಾಗಿ ಟ್ರಂಪ್ ತನ್ನ ಜೊತೆ ಹೇಳಿಕೊಂಡಿದ್ದರೆಂದು 1990ರ ದಶಕದಲ್ಲಿ ನ್ಯೂಯಾರ್ಕ್ ಮೇಯರ್ ಆಗಿದ್ದ ಬಾರ್ಬರಾ ಫೈಫ್ ಕೂಡಾ, ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

 ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆಯ ಪ್ರಚಾರದುದ್ದಕ್ಕೂ ಟ್ರಂಪ್ ಮಹಿಳೆಯರ ಬಗ್ಗೆ ತನ್ನ ಧೋರಣೆಯ ಕುರಿತಾದ ಟೀಕೆಗಳನ್ನು ಅಲ್ಲಗಳೆದಿದ್ದರು. ಆದರೆ ಫಾಕ್ಸ್ ನ್ಯೂಸ್‌ಟಿವಿ ವಾಹಿನಿಯ ನಿರೂಪಕಿ ಮೆಗಿನ್ ಕೆಲ್ಲಿ ಹಾಗೂ ಮಾಜಿ ರಿಪಬ್ಲಿಕನ್ ಅಭ್ಯರ್ಥಿ ಕಾರ್ಲಿ ಫ್ಲೊರಿಡಾ ಬಗ್ಗೆ ಟ್ರಂಪ್ ಅಪಮಾನಕಾರಿ ಟೀಕೆಗಳನ್ನು ಮಾಡಿದುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News