'ಅಜ್ಞಾನ ಒಂದು ಅರ್ಹತೆಯಲ್ಲ' ಟ್ರಂಪ್‌ರನ್ನು ಟೀಕಿಸಿದ ಬರಾಕ್ ಒಬಾಮ
ವಾಶಿಂಗ್ಟನ್, ಮೇ 16: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರ ಜನಮರುಳು ಪ್ರಚಾರವನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ರವಿವಾರ ಟೀಕಿಸಿದ್ದಾರೆ. ಅವರ ‘ಅಪ್ರಬುದ್ಧತೆ’ಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಒಬಾಮ, ‘‘ಅಜ್ಞಾನ ಒಂದು ಅರ್ಹತೆಯಲ್ಲ’’ ಎಂದು ಹೇಳಿದ್ದಾರೆ.
ನ್ಯೂಜರ್ಸಿಯಲ್ಲಿ ನಡೆದ ವಿಶ್ವವಿದ್ಯಾನಿಲಯ ಪದವಿಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನ್ನ ಭಾಷಣದಲ್ಲಿ ನೇರವಾಗಿ ಟ್ರಂಪ್‌ರ ಹೆಸರನ್ನು ಉಲ್ಲೇಖಿಸಲಿಲ್ಲ. ಆದರೆ, ‘ಅಮೆರಿಕನ್ನರನ್ನು ಮತ್ತೊಮ್ಮೆ ಶ್ರೇಷ್ಠರನ್ನಾಗಿ ಮಾಡುವ’ ಘೋಷಣೆಯೊಂದಿಗೆ ತನ್ನ ಚುನಾವಣಾ ಪ್ರಚಾರವನ್ನು ನಡೆಸುತ್ತಿರುವ ಟ್ರಂಪ್‌ರನ್ನು ಉಲ್ಲೇಖಿಸಿ ಒಬಾಮ ಮಾತನಾಡಿರುವುದು ಸ್ಪಷ್ಟವಾಗಿದೆ.
ಹಿಂದೆ ಆಗಿ ಹೋದ ಅಮೆರಿಕದ ‘ಸುವರ್ಣ ಯುಗ’ಕ್ಕಾಗಿ ಹಾತೊರೆಯಬೇಡಿ ಎಂದು ಡೆಮಾಕ್ರಟಿಕ್ ಪಕ್ಷದ ಒಬಾಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ‘‘ಗತಿಸಿ ಹೋದ ‘ಒಳ್ಳೆಯ ದಿನಗಳು’ ಯಾವಾಗಲೂ ಒಳ್ಳೆಯದೇ ಆಗಿರಲಿಲ್ಲ’’ ಎಂದು ಹೇಳಿದ ಅವರು, ಜನಾಂಗೀಯ ತಾರತಮ್ಯ, ಬಡತನ ಮತ್ತು ಮಹಿಳೆಯರ ವಿರುದ್ಧದ ತಾರತಮ್ಯ ಮುಂತಾದ ಪಿಡುಗುಗಳತ್ತ ಬೆಟ್ಟು ಮಾಡಿದರು.
‘‘ಜಗತ್ತು ಈಗ ಹಿಂದೆಂದಿಗಿಂತಲೂ ಹೆಚ್ಚು ಸಂಪರ್ಕದಲ್ಲಿದೆ ಹಾಗೂ ಪ್ರತಿ ದಿನವೂ ಅದು ಹೆಚ್ಚು ಹೆಚ್ಚು ಸಂಪರ್ಕಕ್ಕೊಳಗಾಗುತ್ತಾ ಸಾಗಿದೆ. ಗೋಡೆಗಳನ್ನು ಕಟ್ಟುವುದರಿಂದ ಇದನ್ನು ತಡೆಯಲು ಸಾಧ್ಯವಿಲ್ಲ’’ ಎಂದು ಒಬಾಮ ನುಡಿದರು. ಮೆಕ್ಸಿಕೊದ ಅಕ್ರಮ ವಲಸಿಗರನ್ನು ತಡೆಯುವುದಕ್ಕಾಗಿ ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಗೋಡೆಯೊಂದನ್ನು ನಿರ್ಮಿಸುವ ಟ್ರಂಪ್‌ರ ಪ್ರಸ್ತಾಪವನ್ನು ಅವರು ಈ ರೀತಿಯಾಗಿ ಹೀಯಾಳಿಸಿದ್ದಾರೆನ್ನಲಾಗಿದೆ.