ಮೆಜೆಸ್ಟಿಕ್ ಸಮಸ್ಯೆ ಪರಿಹರಿಸಿ
ಮಾನ್ಯರೆ,
ಬೆಂಗಳೂರಿಗೆ ಬಸ್‌ನಲ್ಲಿ ಬಂದು ಇಳಿದಾಕ್ಷಣ ನಿಮ್ಮನ್ನು ಸ್ವಾಗತಿಸುವುದು ಮೆಜೆಸ್ಟಿಕ್. ನೀವೊಮ್ಮೆ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಸುತ್ತ-ಮುತ್ತ ನೋಡಿದರೆ ‘ನರಕ’ ವೀಕ್ಷಣೆ ಮಾಡಿದಂತಾಗುತ್ತದೆ. ಬಿಎಂಟಿಸಿ ಬಸ್ ನಿಲ್ದಾಣದ ಹಿಂಭಾಗ ಬೀದಿ ವ್ಯಾಪಾರಿಗಳಿದ್ದಾರೆ. ಅಲ್ಲೇ ಪಕ್ಕ ಕಸದ ರಾಶಿಯೇ ಇದೆ. ನೀವಂತೂ ಆ ಜಾಗದಲ್ಲಿ ನಡೆದಾಡುತ್ತಾ ಹೋದರೆ ಮೂಗಿಗೆ ಕೈಇಟ್ಟುಕೊಂಡೇ ಹೋಗಬೇಕು. ಅಲ್ಲಲ್ಲಿ ಕೊಳೆತು ಬಿದ್ದ ಅನ್ನ, ಕೊಳೆತು ನಾರುತ್ತಿರುವ ಕಸದ ರಾಶಿಗಳು, ಪ್ರಾಣಿಗಳ ಮಲಮೂತ್ರ ಇವೆಲ್ಲಾ ಮೆಜೆಸ್ಟಿಕ್‌ನ ಅಂದವನ್ನು ಹಾಳು ಮಾಡಿದೆ. ದಿನ ಕಳೆದಂತೆ ಕಸದ ರಾಶಿ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಅಲ್ಲದೆ ಬೇರೆ ಬೇರೆ ಕಡೆಯಿಂದ ಬರುವ ಬಿಎಂಟಿಸಿ ಬಸ್‌ಗಳು ಏಕಾಏಕಿ ನುಗ್ಗುವುದರಿಂದ ಬಿಎಂಟಿಸಿ ಬಸ್ ನಿಲ್ದಾಣದ ಸುತ್ತ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಜೊತೆಗೆ ನಿಲ್ದಾಣದೊಳಗಿನ ವ್ಯಾಪಾರಿಗಳು ಹಗಲು ದರೋಡೆ ಮಾಡುತ್ತಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ.