ಮತ್ತೊಮ್ಮೆ ಆರು ಸಿಕ್ಸರ್ ಬಾರಿಸುವೆ: ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಯುವಿ ಭರವಸೆ
ಮೊಹಾಲಿ, ಮೇ 15: ಕ್ಯಾನ್ಸರ್‌ನ್ನು ಜಯಿಸಿ ಬಂದಿರುವ, 2011ರ ವಿಶ್ವಕಪ್ ವಿಜೇತ ತಂಡದ ಪ್ರಮುಖ ಆಟಗಾರ ಯುವರಾಜ್ ಸಿಂಗ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ 17 ಮಕ್ಕಳೊಂದಿಗೆ ಬೆರೆತು ಅವರ ನೋವನ್ನು ಹಂಚಿಕೊಂಡರು. ನಿಮ್ಮೆಲ್ಲರ ಹಾರೈಕೆಯಿಂದ ಮತ್ತೊಮ್ಮೆ ಕ್ರಿಕೆಟ್ ಪಂದ್ಯದಲ್ಲಿ ಆರು ಸಿಕ್ಸರ್ ಬಾರಿಸುವುದಾಗಿ ಹೇಳಿದರು.
ನೀವು ಮತ್ತೊಮ್ಮೆ ಸತತ ಆರು ಸಿಕ್ಸರ್ ಬಾರಿಸುತ್ತೀರಾ ಎಂದು ಪುಟಾಣಿಯೊಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯುವಿ, ನೀವೆಲ್ಲರೂ ನನ್ನ ಪರ ಪ್ರಾರ್ಥಿಸಿದರೆ, ನಾನು ಮತ್ತೊಮ್ಮೆ ಆರು ಸಿಕ್ಸರ್ ಬಾರಿಸುವೆ ಎಂದರು.
2007ರಲ್ಲಿ ದಕ್ಷಿಣ ಆಫ್ರಿಕದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಆರು ಸಿಕ್ಸರ್‌ಗಳನ್ನು ಹೇಗೆ ಸಿಡಿಸಿದೆನೆಂದು ನನಗೆ ಗೊತ್ತಿಲ್ಲ. ಆ ನನ್ನ ಸಾಧನೆಗೆ ಸಾಕಷ್ಟು ವರ್ಷ ಆಗಿದೆ ಎಂದು 34ರ ಹರೆಯದ ಯುವರಾಜ್ ಹೇಳಿದರು.
ಮಕ್ಕಳಿಗೆ ಉಪಯುಕ್ತ ಸಲಹೆಗಳನ್ನು ನೀಡಿದ ಯುವರಾಜ್, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆ ವಿರುದ್ಧ ಹೋರಾಡುವಾಗ ಮತ್ತೊಮ್ಮೆ ಜೀವನವನ್ನು ಗೆದ್ದುಬರುವೆ ಎಂಬ ವಿಶ್ವಾಸವಿರಬೇಕು ಎಂದು ಹೇಳಿದರು.
ಐಪಿಎಲ್‌ನಲ್ಲಿ ಈ ವರ್ಷ ಹೈದರಾಬಾದ್ ತಂಡದಲ್ಲಿ ಆಡುತ್ತಿರುವ ಯುವರಾಜ್ ರವಿವಾರ ಇಲ್ಲಿನ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 24 ಎಸೆತಗಳಲ್ಲಿ 42 ರನ್ ಗಳಿಸಿ ಹೈದರಾಬಾದ್ ತಂಡ ಕಿಂಗ್ಸ್‌ಇಲೆವೆನ್ ಪಂಜಾಬ್ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಲು ನೆರವಾದರು.