'ನಿಧಾನಗತಿಯ ಸೌದೀಕರಣದ' ವಿರುದ್ಧ ಪ್ರಮಾಣ ಪತ್ರ ಸುಟ್ಟು ಸೌದಿ ದಂತವೈದ್ಯನ ಪ್ರತಿಭಟನೆ
ಜಿದ್ದಾ : ಕಳೆದ ಎರಡು ವರ್ಷಗಳಿಂದ ನೌಕರಿಗಾಗಿ ಅಲೆದಾಡಿ ಹತಾಶೆಗೊಂಡಿರುವ ಹಫೆರ್-ಅಲ್-ಬಟಿನ್ ನಗರದ ದಂತವೈದ್ಯನೊಬ್ಬತನ್ನ ವಿಶ್ವವಿದ್ಯಾಲಯದ ಪ್ರಮಾಣಪತ್ರವನ್ನು ಸುಟ್ಟು ಹಾಕಿ ಪ್ರತಿಭಟನೆ ನಡೆಸಿದ್ದಾನೆ. ದಂತ ವೈದ್ಯಕೀಯ ಪದವಿ ಪಡೆದ ನಂತರ ಆತ ನೌಕರಿಗಾಗಿ ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.
ತನ್ನ ಪ್ರಮಾಣಪತ್ರವನ್ನು ಸುಡುತ್ತಿರುವ ವೀಡಿಯೋವೊಂದನ್ನೂ ಡಾ. ಮೊಹನ್ನಾ ಸೌದ್ ಅಲ್ ಅನಾಝಿ ಎಂಬ ಹೆಸರಿನ ಈ ವೈದ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಜೊರ್ಡಾನ್ ಯುನಿವರ್ಸಿಟಿ ಆಫ್ ಸಾಯನ್ಸ್ ಎಂಡ್ ಟೆಕ್ನಾಲಜಿಯಿಂದ ಮೊಹನ್ನ ಎರಡು ವರ್ಷಗಳ ಹಿಂದೆ ಪದವಿ ಪಡೆದಿದ್ದಾನೆ. ದೇಶದ ನಾಗರಿಕ ಸೇವಾ ಸಚಿವಾಲಯವು ತನ್ನಂತೆ 600ಕ್ಕೂ ಹೆಚ್ಚು ದಂತವೈದ್ಯರಿಗೆ ಉದ್ಯೋಗ ನೀಡಲು ವಿಫಲವಾಗಿವೆಯೆಂದು ಆತ ಹೇಳಿದ್ದಾನಲ್ಲದೆ ಒಟ್ಟು 310 ಮಹಿಳೆಯರು ಅರ್ಜಿ ಸಲ್ಲಿಸಿದ್ದರೆ ಅವರಲ್ಲಿ 24 ಮಂದಿಗೆ ನೌಕರಿ ದೊರೆತಿದ್ದರೆ, ಒಟ್ಟು 485 ಪುರುಷ ಅಭ್ಯರ್ಥಿಗಳಲ್ಲಿ ಕೇವಲ 185 ಮಂದಿಗೆ ಉದ್ಯೋಗ ದೊರೆತಿದೆಯೆಂದು ಹೇಳಿದ್ದಾನೆ.
ದಂತ ವೈದ್ಯಕೀಯ ಪದವಿಗಾಗಿ ಏಳು ವರ್ಷ ಶ್ರಮಿಸಿ ಏನೂ ಪ್ರಯೋಜನವಾಗಿಲ್ಲವೆಂದು ಹತಾಶನಾಗಿ ತನ್ನ ಪ್ರಮಾಣಪತ್ರವನ್ನು ಸುಟ್ಟು ಹಾಕಿದೆ ಎಂದು ಆತ ಹೇಳಿದ್ದಾನೆ. ದೇಶದ ಆಸ್ಪತ್ರೆಗಳಲ್ಲಿ ಹೆಚ್ಚು ಸಂಖ್ಯೆಯ ವಿದೇಶಿ ದಂತವೈದ್ಯರನ್ನು ನೇಮಿಸಲಾಗಿದೆಯೆಂದು ತನಗೆ ತಿಳಿದಿದೆ ಎಂದೂ ಆತ ತಿಳಿಸಿದ್ದಾನೆ.
ಮೊಬೈಲ್ ಕ್ಷೇತ್ರದ ಸೌದೀಕರಣದ ಬಗ್ಗೆ ಪ್ರಸ್ತಾಪಿಸುತ್ತಾ ಈ ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ವೇತನ ದೊರೆಯುತ್ತಿಲ್ಲವೆಂದು ಹೇಳಿದ ಡಾ. ಮೊಹನ್ನಾ ಉತ್ತಮ ವೇತನ ದೊರೆಯುವ ಕ್ಷೇತ್ರಗಳಲ್ಲಿ ಸೌದೀಕರಣಕ್ಕೆ ಒತ್ತು ನೀಡಬೇಕೆಂದು ಹೇಳಿದ್ದಾನೆ.